ನ್ಯೂಸ್ ನಾಟೌಟ್:ನಮ್ಗೆ ಅಪರೂಪಕ್ಕೊಮ್ಮೆ ಊಟದಲ್ಲೇನಾದರೂ ಕೂದಲು ಸಿಕ್ಕಿದ್ರೆ ಊಟವನ್ನೇ ಮಾಡದ ಮನಸ್ಸು ಬಂದು ಬಿಡುತ್ತೆ.ಅದು ಗಂಟಲೊಳಗೆ ಸೇರಿದ್ರೆ ವಾಂತಿ ಮಾಡುವಷ್ಟು ವಾಕರಿಕೆ ಬಂದು ಬಿಡುತ್ತೆ.ಆದರೆ ಇಲ್ಲೊಬ್ಬಳು ೧೫ ವರ್ಷದ ಬಾಲಕಿಯ ಹೊಟ್ಟೆಯಲ್ಲಿ ಸುಮಾರು ೨ ಕೆಜಿ ತೂಕವಿರುವ ಕೂದಲಿನ ರಾಶಿಯೇ ಪತ್ತೆಯಾಗಿದೆ.ಅಬ್ಬಬ್ಬಾ..!ಇಷ್ಟೊಂದು ಕೂದಲು ಹೊಟ್ಟೆಯೊಳಗೆ ಹೋಗಿದ್ದು ಹೇಗೆ?ಅಲ್ಲಿಯವರೆಗೆ ಮನೆಯರ ಗಮನಕ್ಕೂ ಬರಲಿಲ್ಲವೇಕೆ? ಎಂದು ಅಚ್ಚರಿ ಪಡುತ್ತಿದ್ದೀರಾ ಅಲ್ವ? ಇಲ್ಲಿದೆ ನೋಡಿ ವರದಿ..
ಹೊಟ್ಟೆಯಲ್ಲಿ ಗಡ್ಡೆ ಬೆಳೆದ ಪರಿಣಾಮ ಆಕೆಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು.ಪರಿಣಾಮ ಚಿಕಿತ್ಸೆಗೆಂದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಈಕೆ ಹೊಟ್ಎಯನ್ನು ಪರೀಕ್ಷಿಸಿದ ವೈದ್ಯರಿಗೆ ಶಾಕ್ ಆಗಿದೆ.ಏಕೆಂದರೆ 15 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ಬರೋಬ್ಬರಿ ಎರಡು ಕೆಜಿ ಕೂದಲನ್ನು ನೋಡಿ ದಂಗಾಗಿದ್ದಾರೆ. ಈ ಘಟನೆ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದಿದ್ದು,ಅಲ್ಲೇ ಸಮೀಪದ ಆಸ್ಪತ್ರೆ ವೈದ್ಯರು ಹೊರತೆಗೆದಿದ್ದಾರೆ.
ಪಾಲಕ್ಕಾಡ್ನ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಫೆ. 8 ರಂದು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಸಿಟಿ ಸ್ಕ್ಯಾನ್ ಮಾಡಿದಾಗ ಗಡ್ಡೆ ಇರುವುದು ಪತ್ತೆಯಾಗಿತ್ತು. ನಂತರ ಎಂಡೋಸ್ಕೋಪಿ ನಡೆಸಿದಾಗ ಹೊಟ್ಟೆಯಲ್ಲಿ ಕೂದಲಿನ ರಾಶಿ ಪತ್ತೆಯಾಗಿದೆ.ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಶಸ್ತ್ರಚಿಕಿತ್ಸಾ ವಿಭಾಗದ ಪ್ರೊ. ಡಾ. ವೈ. ಶಹಜಹಾನ್ ನೇತೃತ್ವದಲ್ಲಿ ಎರಡು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಕೂದಲಿನ ರಾಶಿಯನ್ನು ಹೊರ ತೆಗೆಯಲಾಯಿತು. ಹುಡುಗಿಯು ನಿಯಮಿತವಾಗಿ ತನ್ನ ಕೂದಲನ್ನು ಸೇವಿಸಿದ್ದರಿಂದ ಅಷ್ಟೊಂದು ಕೂದಲು ಹೊಟ್ಟೆಯಲ್ಲಿ ಸೇರಿತ್ತು ಎಂದು ವರದಿಯಾಗಿದೆ.
ಆದರೆ ಆಕೆ ಯಾಕೆ ಕೂದಲು ತಿನ್ನುತ್ತಿದ್ದಳು.ಇದೊಂದು ಕಾಯಿಲೆಯ ಅನ್ನೋದರ ಬಗ್ಗೆ ನೋಡೋದಾದರೆ ಆಕೆ ಕೂದಲು ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದಳು.ಈ ಸ್ಥಿತಿಯನ್ನು ‘ಟ್ರೈಕೋಬೆಜೋರ್’ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಇದು ಆತಂಕ ಮತ್ತು ಒತ್ತಡದ ಮಕ್ಕಳಲ್ಲಿ ಅಪರೂಪವಾಗಿ ಕಂಡುಬರುತ್ತದೆ. ಸೇವಿಸುವ ಕೂದಲು ಹೊಟ್ಟೆಯಲ್ಲಿರುವ ಆಹಾರದೊಂದಿಗೆ ಸಂಯೋಜನೆಗೊಂಡು ದೈತ್ಯ ಗೆಡ್ಡೆಯನ್ನು ರೂಪಿಸಬಹುದು. ಈ ರೋಗ ಲಕ್ಷಣಗಳು ಯಾವುವೆಂದರೆ, ಆಹಾರದಲ್ಲಿ ಆಸಕ್ತಿಯ ನಷ್ಟ, ರಕ್ತಹೀನತೆ, ಕುಂಠಿತ ಬೆಳವಣಿಗೆ ಮತ್ತು ದೀರ್ಘಕಾಲದ ಆಯಾಸವನ್ನು ಒಳಗೊಂಡಿರುತ್ತದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.