ನ್ಯೂಸ್ ನಾಟೌಟ್ : ಕಳ್ಳತನ ಮಾಡೋದಕ್ಕೆ ಯಾವೆಲ್ಲ ತಂತ್ರಗಳನ್ನು ಮಾಡಬೇಕೋ ಅವೆಲ್ಲವನ್ನೂ ಕಳ್ಳರು ಪ್ರಯೋಗ ಮಾಡುತ್ತಲೇ ಇರುತ್ತಾರೆ.ಅಪರಿಚಿತ ವ್ಯಕ್ತಿಗಳು ಮನೆ ಮಂದಿಯನ್ನು ಕಟ್ಟಿ ಹಾಕಿ ಕಳವು ಮಾಡಿದ್ದ ಪ್ರಕರಣ ಪುತ್ತೂರಿನಿಂದ ಈ ಹಿಂದೆ ವರದಿಯಾಗಿತ್ತು.ಇದೀಗ ಇಂತಹುದ್ದೇ ಒಂದು ಘಟನೆ ಚಿಕ್ಕಮಗಳೂರಿನಿಂದ ವರದಿಯಾಗಿದೆ.
ನಾಲ್ವರು ಅಪರಿಚಿತ ಯುವಕರ ತಂಡವೊಂದು ಮನೆ ಮಾಲಿಕನಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಲಾಂಗ್ ಇಟ್ಟು ಮನೆಯಲ್ಲಿದ್ದ ಸುಮಾರು 5 ಲಕ್ಷ ನಗದು, 30 ಗ್ರಾಂ ಮಾಂಗಲ್ಯ ಸರವನ್ನ ಹೊತ್ತೊಯ್ದಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ೮ ಗಂಟೆಗೆ ಈ ಘಟನೆ ನಡೆದಿದೆ.
ಹೆಬ್ಬಾರಟ್ಟಿ ಅನಂತ ಹೆಬ್ಬಾರ್ ಎಂಬುವರ ಮನೆಯಲ್ಲಿ ದರೋಡೆ ನಡೆದಿದ್ದು ನಾಲ್ವರು ಅಪರಿಚಿತ ಯುವಕರ ತಂಡ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಮನೆ ಮಾಲೀಕನ ಕುತ್ತಿಗೆಗೆ ಹರಿತವಾದ ಲಾಂಗ್ ಇಟ್ಟು ಬೆದರಿಸಿ ಮನೆಯಲ್ಲಿದ್ದ ಸುಮಾರು ಐದು ಲಕ್ಷ ನಗದು ಸೇರಿದಂತೆ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ. ಮಾತ್ರವಲ್ಲ ಈ ವೇಳೆ ತಡೆಯಲು ಬಂದ ಕಾರ್ಮಿಕ ಮಾಣಿ ಭಟ್ಟ ಎಂಬವರ ಕೈಗೆ ಹರಿತವಾದ ಆಯುಧದಿಂದ ಗಂಭೀರ ಹಲ್ಲೆ ಮಾಡಿದ್ದಾರೆ. ಈ ವೇಳೆ ಕಾರ್ಮಿಕ ಬೊಬ್ಬೆ ಹೊಡೆದ ಪರಿಣಾಮ ಅಕ್ಕಪಕ್ಕದ ಜನ ಸೇರುತ್ತಿದ್ದಂತೆ ಮೂವರು ಕಾರಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.ಓರ್ವ ಅರಮನೆ ತಲಗೂರು ಎಂಬ ಗ್ರಾಮದ ಅರಣ್ಯದಲ್ಲಿ ಅವಿತು ಕೂತಿದ್ದ ಎನ್ನಲಾಗಿದ್ದು ಸ್ಥಳೀಯರು ಸೇರಿ ಅರಣ್ಯ ಪ್ರದೇಶದಲ್ಲಿ ಹುಡುಕಾಡಿದಾಗ ಓರ್ವ ಪತ್ತೆಯಾಗಿದ್ದಾನೆ. ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎನ್ನಲಾಗಿದೆ.ಘಟನಾ ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.