ನ್ಯೂಸ್ ನಾಟೌಟ್ : ದ.ಕ ಲೋಕಸಭಾ ಬಿಜೆಪಿ ಟಿಕೆಟ್ ಗಾಗಿ ಮತ್ತೊಬ್ಬ ಹಿಂದೂ ಮುಖಂಡನ ಹೆಸರು ಕೇಳಿ ಬಂದಿದೆ.ಇದು ಕರಾವಳಿ ಬಿಜೆಪಿಗೆ ಮತ್ತೆ ತಲೆ ನೋವಾಗಿ ಪರಿಣಮಿಸಲಿದೆಯಾ ಎನ್ನುವ ಬಗ್ಗೆ ಅಭಿಪ್ರಾಯಗಳು ಕೇಳಿ ಬಂದಿವೆ.
ಕರಾವಳಿಯ ಹಿಂದುತ್ವದ ಪ್ರಭಾವಿ ಮುಖಂಡ ಸತ್ಯಜಿತ್ ಸುರತ್ಕಲ್ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವ ಬಗ್ಗೆ ಚರ್ಚೆಗಳು ನಡಿತಿದ್ದು, ಸತ್ಯಜಿತ್ ಸುರತ್ಕಲ್ ಗೆ ಟಿಕೆಟ್ ನೀಡಬೇಕು ಎಂದು ಸತ್ಯಜಿತ್ ಅಭಿಮಾನಿ ಬಳಗ ರಹಸ್ಯ ಮೀಟಿಂಗ್ ನಡೆಸಿದ್ದಾರೆನ್ನುವ ಬಗೆಗಿನ ವಿಡಿಯೋಗಳು ಹರಿದಾಡುತ್ತಿವೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಮಠ ಎಂಬಲ್ಲಿ ಈ ಗೌಪ್ಯ ಸಭೆ ನಡೆದಿದ್ದು, ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಪ್ರಮುಖನೋರ್ವನ ಮನೆಯಲ್ಲಿ ಸಭೆ ನಡೆದಿದೆ ಎನ್ನಲಾಗಿದೆ.
ಸಭೆಯಲ್ಲಿ ಟಿಕೆಟ್ ಅಕಾಂಕ್ಷಿ, ಬಿಲ್ಲವ ಸಮಾಜದ ನಾಯಕ ಸತ್ಯಜಿತ್ ಸುರತ್ಕಲ್ ಅವರು ಕೂಡ ಭಾಗಿಯಾಗಿರುವ ಫೋಟೋಗಳು ಲಭ್ಯವಾಗಿವೆ. ದ.ಕ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಪ್ರಮುಖರ ಸಭೆ ನಡೆದ ಮಾಹಿತಿ ಲಭ್ಯವಾಗಿದ್ದು,ಫೆ. 25 ರಂದು ಜಿಲ್ಲೆಯಲ್ಲಿ ಸತ್ಯಜಿತ್ ಪರವಾಗಿ ಸಮಾವೇಶ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಸಂಬಂಧ ರಾಜ್ಯ ಬಿಜೆಪಿ ಹಾಗೂ ದೆಹಲಿಯ ಹೈಕಮಾಂಡ್ ಗೆ ಬೇಡಿಕೆ ಇಡಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ತಾಲೂಕು ಹಾಗೂ ವಾರ್ಡ್ ಕಮಿಟಿಗಳ ರಚನೆ ಹಾಗೂ ಜಿಲ್ಲಾ ವಾರ್ಡ್, ತಾಲೂಕು ವಾರ್ಡ್ ಮತ್ತು ಗ್ರಾಮ ಮಟ್ಟದ ವಾರ್ಡ್ ಗಳಿಗೆ ಸಂಚಾಲಕರ ನೇಮಕವಾಗಲಿದ್ದು, ಆ ಮೂಲಕ ಸಭೆಗಳನ್ನು ನಡೆಸಿ ಕಾರ್ಯಕರ್ತರ ಸಂಘಟನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಹಿಂಜಾವೇ ಕಾರ್ಯಕರ್ತರು, ಬೇರೆ ಬೇರೆ ಸಂಘಟನೆಯ ಕಾರ್ಯಕರ್ತರು, ಬಿಲ್ಲವ ಪ್ರಮುಖರನ್ನು ಗುರುತಿಸಿ ಕಮಿಟಿ ರಚನೆ ಮಾಡುವ ಬಗ್ಗೆಯೂ ಯೋಚಿಸಲಾಗುತ್ತಿದೆ ಎನ್ನಲಾಗಿದ್ದು,ಪ್ರಚಾರದ ದೃಷ್ಟಿಯಿಂದ ಸೋಷಿಯಲ್ ಮೀಡಿಯಾ ತಂಡ ರಚನೆ ಸೇರಿದಂತೆ ಚಿಂತನೆ ನಡೆಸಲಾಗುತ್ತಿದೆ ಎನ್ನುವ ಬಗೆಗಿನ ಮಾತುಗಳು ಕೇಳಿ ಬಂದಿವೆ.
ಈ ಮೂಲಕ ದ.ಕ. ಬಿಜೆಪಿ ಟಿಕೆಟ್ ಗಾಗಿ ಮತ್ತೆ ಹಿಂದುತ್ವದ ಪ್ರಭಾವಿ ನಾಯಕ ಸತ್ಯಜಿತ್ ಅಖಾಡಕ್ಕಿಳಿದಿದ್ದಾರೆ.ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮಂಗಳೂರು ಉತ್ತರ ಕ್ಷೇತ್ರದ ಆಕಾಂಕ್ಷಿಯಾಗಿದ್ದರು ಸತ್ಯಜಿತ್.ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಜೊತೆ ಸತ್ಯಜಿತ್ ಮುನಿಸಿಕೊಂಡಿದ್ದರು.ಈ ಬಾರಿ ಮತ್ತೆ ಲೋಕಸಭಾ ಟಿಕೆಟ್ ಗಾಗಿ ಸತ್ಯಜಿತ್ ಸುರತ್ಕಲ್ ಫೈಟ್ ಮಾಡಲಿದ್ದು, ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ಮಧ್ಯೆ ಸತ್ಯಜಿತ್ ಹೆಸರು ಕೂಡ ಇದೀಗ ಕೇಳಿ ಬರುತ್ತಿದೆ. ಸದ್ಯ ಈ ಟಿಕೆಟ್ ಫೈಟ್ ಕರಾವಳಿ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.