ನ್ಯೂಸ್ ನಾಟೌಟ್ :ಇತ್ತೀಚಿನ ದಿನಗಳಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆಯೇನೋ ಅನ್ನಿಸತೊಡಗಿದೆ.ಹೌದು,ಗ್ರಾಹಕನೋರ್ವ ತನ್ನ ಹಣ ಬ್ಯಾಂಕ್ನಲ್ಲಿ ಸೇಫಾಗಿರುತ್ತದೆ ಅಂತ ಹೇಳಿ ಬ್ಯಾಂಕ್ನಲ್ಲಿ ಹಣ ಕೂಡಿಟ್ಟರೆ ಬ್ಯಾಂಕ್ ಮ್ಯಾನೇಜರೇ ಅದನ್ನು ದೋಚಿಕೊಂಡ ಪ್ರಸಂಗ ಎದುರಾಗಿದೆ.
ಶ್ವೇತಾ ಶರ್ಮ ಎನ್ನುವ ಭಾರತೀಯ ಮಹಿಳೆಗೆ ವಂಚನೆಯಾಗಿದ್ದು, ಐಸಿಐಸಿಐ ಬ್ಯಾಂಕ್ನ ಮ್ಯಾನೇಜರ್ ತಮ್ಮ ಖಾತೆಯಲ್ಲಿದ್ದ 16 ಕೋಟಿ ರೂಪಾಯಿ (1.9 ಮಿಲಿಯನ್ ಯುಎಸ್ ಡಾಲರ್) ಹಣವನ್ನು ಕದ್ದು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಅಮೆರಿಕಾ ಅಕೌಂಟ್ನಿಂದ ಅವರು ಐಸಿಐಸಿಐ ಬ್ಯಾಂಕ್ಗೆ ಈ ಹಣವನ್ನು ವರ್ಗಾವಣೆ ಮಾಡಿದ್ದರು. ಈ ಹಣವನ್ನು ಎಫ್ಡಿಯಲ್ಲಿ ಇಡುವ ಸಲುವಾಗಿ ತಮ್ಮ ಖಾತೆಗೆ ಹಾಕಿದ್ದರು ಎಂದು ತಿಳಿಸಿದ್ದಾರೆ. ಆದರೆ, ಬ್ಯಾಂಕ್ ಅಧಿಕಾರಿ ಫೇಕ್ ಅಕೌಂಟ್ಅನ್ನು ರಚಿಸಿದ್ದಲ್ಲದೆ, ತಮ್ಮ ಸಹಿಯನ್ನೂ ಕೂಡ ನಕಲಿ ಮಾಡಿದ್ದಾರೆ. ಸಾಕಷ್ಟು ದಾಖಲೆಯನ್ನೂ ಬದಲಾಯಿಸುವ ಮೂಲಕ ನನ್ನ ಗಮನಕ್ಕೆ ಬರದೇ ಖಾತೆಯಲ್ಲಿರುವ ಹಣವನ್ನು ಬ್ಯಾಂಕ್ ಮ್ಯಾನೇಜರ್ ಕದ್ದಿದ್ದಾರೆ ಎಂದು ಮಹಿಳೆ ವಾದಿಸಿದ್ದಾರೆ.
ಮನೆಯಲ್ಲಿ ಹಣವನ್ನು ಕೂಡಿಟ್ಟರೆ ಅಪಾಯ ಜಾಸ್ತಿ ಎನ್ನುವ ಕಾರಣಕ್ಕೆ ಹೆಚ್ಚಿನ ಮಂದಿ ಬ್ಯಾಂಕ್ನಲ್ಲಿ ಎಫ್ಡಿ ಇಡುವ ಮೂಲಕ ತಮ್ಮ ಹಣವನ್ನು ಸುರಕ್ಷಿತವಾಗಿರಿಸುವ ಬಗ್ಗೆ ಗಮನ ನೀಡುತ್ತಾರೆ. ಆದರೆ, ಶ್ವೇತಾ ಶರ್ಮ ಅವರಿಗೆ ಹೀಗಾಗಿಲ್ಲ. ಅಮೆರಿಕ ಹಾಗೂ ಹಾಂಕಾಂಗ್ನಲ್ಲಿ ಕೆಲಸ ಮಾಡಿದ್ದ ಶ್ವೇತಾ ಶರ್ಮ 2016ರಲ್ಲಿ ವಿದೇಶದಿಂದ ಭಾರತಕ್ಕೆ ವಾಪಸಾಗಿದ್ದರು. ತಾವು ಜೀವಮಾನದಲ್ಲಿ ಕೂಡಿಟ್ಟ ಉಳಿತಾಯದ ಹಣವಾದ 13.5 ಕೋಟಿ ರೂಪಾಯಿಗಳನ್ನು ನಾಲ್ಕು ವರ್ಷಗಳ ಕಾಲ ಐಸಿಐಸಿಐ ಬ್ಯಾಂಕ್ನಲ್ಲಿ ಎಫ್ಡಿ ಇರಿಸಿದ್ದರು. ನಾಲ್ಕು ವರ್ಷಗಳಲ್ಲಿ ಬಡ್ಡಿ ಸೇರಿ 16 ಕೋಟಿಗೆ ಏರುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದರು. ಜನವರಿಯಲ್ಲಿ ಬ್ಯಾಂಕ್ನ ಹೊಸ ಉದ್ಯೋಗಿ ಅವರು ಇಟ್ಟ ಹಣದ ಮೇಲೆ ಉತ್ತಮ ಆದಾಯ ಬರುವ ಆಫರ್ ನೀಡಿದಾಗ ವಂಚನೆ ಬೆಳಕಿಗೆ ಬಂದಿದೆ. ತನ್ನ ಖಾತೆಯಲ್ಲಿದ್ದ ಎಫ್ಸಿ ಹಣ ನಾಪತ್ತೆಯಾಗಿರುವುದನ್ನು ಅವರು ಗಮನಿಸಿದ್ದಾರೆ.
ಈ ವಿಚಾರ ತಿಳಿದ ಬೆನ್ನಲ್ಲಿಯೇ ಐಸಿಐಸಿಐ ಬ್ಯಾಂಕ್, ಆರೋಪಿಯಾಗಿರುವ ಶಾಖೆಯ ವ್ಯವಸ್ಥಾಪಕರನ್ನು ತನಿಖೆಗಾಗಿ ಅಮಾನತುಗೊಳಿಸಿದೆ ಮತ್ತು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗಕ್ಕೆ (ಇಒಡಬ್ಲ್ಯು) ದೂರು ನೀಡಿದೆ. ‘ನಮ್ಮ ಗ್ರಾಹಕರೇ ನಮಗೆ ಮುಖ್ಯ ಆದ್ಯತೆ. ಅವರ ಹಿತಾಸಕ್ತಿಗಳನ್ನು ಕಾಪಾಡಲು ಬ್ಯಾಂಕ್ ಸಂಪೂರ್ಣವಾಗಿ ಬದ್ಧವಾಗಿದೆ. ಈ ವಿಚಾರದಲ್ಲೂ ಕೂಡ ಗ್ರಾಹಕರ ಆರ್ಥಿಕ ಹಿತಾಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ನಾವು ಖಚಿತಪಡಿಸಿಕೊಂಡಿದ್ದೆವೆ ಎಂದು ಹೇಳಿದ್ದಾರೆ.