ನ್ಯೂಸ್ ನಾಟೌಟ್:ಫೆ.14ಕ್ಕೆ ಅಬುಧಾಬಿಯ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ಮೋದಿಯವರು ಉದ್ಘಾಟಿಸಲಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಸ್ವಾಮಿನಾರಾಯಣ ಸಂಸ್ಥೆಯ (ಬಿಎಪಿಎಸ್) ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.ಈ ದೇವಾಲಯವನ್ನು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ನಿರ್ಮಿಸಿದ್ದು, ಯುಎಇಯ ಮೊದಲ ಸಾಂಪ್ರದಾಯಿಕ ಕಲ್ಲಿನ ಹಿಂದೂ ದೇವಾಲಯ ಇದಾಗಿದೆ ಎಂದು ಹೇಳಲಾಗಿದೆ.
ಸುಮಾರು 700 ಕೋಟಿ ರೂ.ವೆಚ್ಚದ ಈ ದೇವಾಲಯ ಹಲವು ವಿಶೇಷತೆಗಳನ್ನು ಹೊಂದಿದ್ದು, ಒಟ್ಟು 27 ಎಕರೆ ಭೂಮಿಯಲ್ಲಿದೆ. ಉದ್ಘಾಟನೆ ಹಿನ್ನೆಲೆ ಬಿಎಪಿಎಸ್ನ ಆಧ್ಯಾತ್ಮಿಕ ಗುರು ಸ್ವಾಮಿ ಮಹಂತ್ ಸ್ವಾಮಿ ಮಹಾರಾಜ್ ಅವರು ಯುಎಇಗೆ ಆಗಮಿಸಿದ್ದಾರೆ.ಈ ಮಂದಿರದ ಉದ್ಘಾಟನೆಯನ್ನು ‘ಸೌಹಾರ್ದತೆಯ ಹಬ್ಬ’ದಂತೆ ಆಚರಿಸಲಾಗುತ್ತದೆ. ನಂಬಿಕೆಯನ್ನು ಬಲಪಡಿಸುವುದು, ಎಲ್ಲಾ ತಲೆಮಾರುಗಳು ಮತ್ತು ಹಿನ್ನೆಲೆಗಳುಳ್ಳ ಜನರ ನಡುವೆ ಸಾಮರಸ್ಯವನ್ನು ಬೆಳೆಸುವುದು ಈ ಉದ್ಘಾಟನಾ ಕಾರ್ಯಕ್ರಮದ ಧ್ಯೇಯವಾಗಿದೆ ಎಂದು ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಈ ದೇವಾಲಯಕ್ಕೆ 40,000 ಕ್ಯೂಬಿಕ್ ಮೀಟರ್ ಅಮೃತಶಿಲೆ, 1,80,000 ಘನ ಮೀಟರ್ ಸ್ಟ್ಯಾಂಡ್ ಸ್ಟೋನ್ ಮತ್ತು 18 ಲಕ್ಷಕ್ಕೂ ಹೆಚ್ಚು ಇಟ್ಟಿಗೆಗಳನ್ನು ಬಳಸಲಾಗುತ್ತಿದೆ. ಇಲ್ಲಿಯವರೆಗೆ 4 ಲಕ್ಷ ಗಂಟೆಗಳ ಕಾಲ ಕೆಲಸ ಮಾಡಲಾಗಿದೆ ಅನ್ನೋದೇ ವಿಶೇಷ ಸಂಗತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಈ ಭೇಟಿ ಭಾರತ ಮತ್ತು ಯುಎಇ ನಡುವಿನ ನಿಕಟ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಪ್ರಧಾನಮಂತ್ರಿಯಾಗಿ ಯುಎಇಗೆ ಇದು ಮೋದಿಯ ಏಳನೇ ಭೇಟಿಯಾಗಿರೋದು ವಿಶೇಷ.