ನ್ಯೂಸ್ ನಾಟೌಟ್: ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ ಮತ್ತು ಕಾರ್ಯಕ್ರಮಕ್ಕೆ ಗೈರುಹಾಜರಾದ ಕಾಂಗ್ರೆಸ್ ನಡೆಯನ್ನು ಖಂಡಿಸಿದ ಕಾಂಗ್ರೆಸ್ ನ ಹಿರಿಯ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣಂ ಎಂಬವರನ್ನು ಕಾಂಗ್ರೆಸ್ ನಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ವರದಿ ತಿಳಿಸಿದೆ.
ಅಶಿಸ್ತಿನ ಕಾರಣಕ್ಕೆ ಮತ್ತು ಪದೇ ಪದೇ ಪಕ್ಷದ ವಿರುದ್ಧ ಹೇಳಿಕೆ ನೀಡಿದ ಆರೋಪದಲ್ಲಿ ಆಚಾರ್ಯ ಪ್ರಮೋದ್ ಕೃಷ್ಣಂ ಉಚ್ಚಾಟಿಸಲಾಗಿದೆ ಎಂದು ಪಕ್ಷ ಹೇಳಿಕೆ ನೀಡಿದೆಯಾದರೂ ಮೋದಿಯನ್ನು ಹೊಗಳಿ ರಾಮಮಂದಿರದ ಕಾರ್ಯವನ್ನು ಶ್ಲಾಘಿಸಿದ್ದಕ್ಕೆ ಈ ಕ್ರಮ ಕೈಗೊಳ್ಳಳಾಗಿದೆ ಎಂದು ಚರ್ಚೆಗಳು ಜೋರಾಗಿವೆ.
2019ರ ಲೋಕಸಭಾ ಚುನಾವಣೆಯಲ್ಲಿ ಲಕ್ನೋ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಮೋದ್ ಕೃಷ್ಣಂ ಸೋಲು ಅನುಭವಿಸಿದ್ದರು. ಆದರೂ, 1.8 ಲಕ್ಷ ಮತ ಪಡೆಯುವ ಮೂಲಕ ಗಮನ ಸೆಳೆದಿದ್ದರು ಎನ್ನಲಾಗಿದೆ. 2014ರ ಚುನಾವಣೆಯಲ್ಲಿ ಕೂಡಾ ಉತ್ತರಪ್ರದೇಶದ ಸಂಭಾಲ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಲಿಲ್ಲ. ಇದಕ್ಕೂ ಮುನ್ನ ಆಚಾರ್ಯ ಪ್ರಮೋದ್ ಪಕ್ಷದ ಉತ್ತರ ಪ್ರದೇಶ ಉಸ್ತುವಾರಿ ಹೊಂದಿದ ಪ್ರಿಯಾಂಕಾ ಗಾಂಧಿಯವರಿಗೆ ಸಲಹೆ ನೀಡಲು ರಚಿಸಿದ್ದ ಕಾಂಗ್ರೆಸ್ ನ ಉತ್ತರ ಪ್ರದೇಶ ಸಲಹಾ ಮಂಡಳಿಯ ಭಾಗವಾಗಿದ್ದರು.
ಸಂಭಾಲ್ ಜಿಲ್ಲೆಯ ಕಲ್ಕಿಧಾಮದಲ್ಲಿ ಫೆಬ್ರವರಿ 19ರಂದು ನಡೆಯಲಿರುವ ಶಿಲಾನ್ಯಾಸ ಸಮಾರಂಭಕ್ಕೆ ಆಚಾರ್ಯ ಪ್ರಮೋದ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಿದ್ದರು. ಇಲ್ಲಿ ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನೂ ಆಚಾರ್ಯ ಪ್ರಮೋದ್ ಭೇಟಿಯಾಗಿದ್ದರು. ಆದರೆ ಯಾವ ನಿರ್ದಿಷ್ಟ ಕಾರಣಕ್ಕೆ ಅವರನ್ನು ಉಚ್ಚಾಸಲಾಗಿದೆ ಎನ್ನುವುದನ್ನು ಕಾಂಗ್ರೆಸ್ ಬಹಿರಂಗಪಡಿಸಿಲ್ಲ ಎನ್ನಲಾಗಿದೆ.