ನ್ಯೂಸ್ ನಾಟೌಟ್ : ಗ್ರಾಮೀಣ ಪ್ರದೇಶಗಳ ಕಡೆ ಬಸ್ಸುಗಳಲ್ಲಿ ಓಡಾಡುವಾಗ ನಾಯಿ ಮರಿ, ಕೋಳಿ ಮರಿ , ಬೆಕ್ಕಿನ ಮರಿ ಹೀಗೆ ಕೊಂಡೊಯ್ಯುವವರ ಸಂಖ್ಯೆ ಹೆಚ್ಚಾಗಿರುತ್ತೆ.ಕೆಲವೊಂದ್ಸಲ ರೊಚ್ಚಿಗೆದ್ದ ಕಂಡೆಕ್ಟರ್ ಇದನ್ನೆಲ್ಲ ಗಮನಿಸಿ ಬೈದಿದ್ದು ಇದೆ. ಇದಕ್ಕಾಗಿ ಪ್ರಯಾಣಿಕರು ಠಾಣೆ ಮೆಟ್ಟಿಲೇರಿದ್ದೂ ಇದೆ. ಇದೀಗ ಇಲ್ಲೊಬ್ಬರು ಮಹಿಳೆ ರಟ್ಟಿನ ಬಾಕ್ಸ್ನಲ್ಲಿ ಕೋಳಿಯನ್ನು ಮುಚ್ಚಿಟ್ಟುಕೊಂಡು ಪ್ರಯಾಣ ಬೆಳೆಸಿದ್ದಾರೆ.
ಕೂಡ್ಲಿಗಿಯಿಂದ ಜಗಳೂರು ಕಡೆ ಪ್ರಯಾಣಿಸುತ್ತಿದ್ದಾಗ ಬಾಕ್ಸ್ನಲ್ಲಿದ್ದ ಕೋಳಿ ಕೋ ಕೋ ಕೋ ಎಂದು ಕೂಗಲಾರಂಭಿಸಿದೆ. ಕೋಳಿ ಕೂಗು ಕೇಳಿ ಬಸ್ ಕಂಡಕ್ಟರ್ “ಕೋಳಿ ಯಾರದು”? ಎಂದು ಪ್ರಶ್ನಿಸಿದ್ದಾರೆ. ಕೊನೆಗೆ ಆ ಕೋಳಿ ಮಾಲೀಕರಾದ ಮಹಿಳೆಯ ಬಳಿ ಕೋಳಿಗೆ ಟಿಕೆಟ್ ಕೇಳಿದಾಗ “ಟಿಕೆಟ್ ತಗೋತಿನಿ ಆದ್ರೆ ಅದಕ್ಕೂ ಬಸ್ಸಿನಲ್ಲಿ ಸೀಟು ಕೊಡಬೇಕು” ಎಂದು ವಾಗ್ವಾದಕ್ಕಿಳಿದಿದ್ದಾರೆ..!
ಈ ಅಪರೂಪದ ಘಟನೆ ಭಾನುವಾರ ರಾತ್ರಿ 7-30ಕ್ಕೆ ಕೂಡ್ಲಿಗಿ ಬಸ್ ನಿಲ್ದಾಣದ ಹಗರಿಬೊಮ್ಮನಹಳ್ಳಿ ಸಾರಿಗೆ ಸಂಸ್ಥೆ ಘಟಕದ ಧರ್ಮಸ್ಥಳ ಕಡೆ ಹೋಗುವ ಮಾರ್ಗದ ಬಸ್ಸಿನಲ್ಲಿ ನಡೆದಿದೆ.ಹಗರಿಬೊಮ್ಮನಹಳ್ಳಿ ಘಟಕದಿಂದ ಹೊಸಪೇಟೆ ಮೂಲಕ ಕೂಡ್ಲಿಗಿ, ಕೊಟ್ಟೂರು, ಜಗಳೂರು ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುವ ಬಸ್ಸು ಕೂಡ್ಲಿಗಿ ಬಸ್ ನಿಲ್ದಾಣದಲ್ಲಿ ಬಂದು ನಿಲ್ಲುತ್ತಿದ್ದಂತೆ ಕೂಡ್ಲಿಗಿಯಿಂದ ಜಗಳೂರು ಕಡೆ ಪ್ರಯಾಣ ಬೆಳೆಸುವ ಮಹಿಳೆ ತನ್ನ ಸಂಬಂಧಿಕರ ಜೊತೆ ಬಸ್ಸು ಹತ್ತಿದ್ದು ಕೈಯಲ್ಲಿದ್ದ ಬಾಕ್ಸ್ ನ್ನು ಸೀಟಿನ ಮೇಲಿರುವ ಲಗೇಜ್ ಇಡುವ ಜಾಗದಲ್ಲಿಟ್ಟಾಗ ಬಾಕ್ಸ್ ನಲ್ಲಿದ್ದ ಕೋಳಿ ಕೂಗುವ ಸದ್ದು ಮಾಡಿದೆ.
ಆಗ ಕಂಡಕ್ಟರ್ ಮಹಿಳೆಗೆ ಟಿಕೆಟ್ ಕೇಳಿದ್ದೆ ತಡ “ಟಿಕೆಟ್ ತಗಂತೀನಿ ಆದ್ರೆ ಕೋಳಿಗಾಗಿ ಸೀಟು ಕೊಡಲೇಬೇಕು” ಎಂದು ಕಂಡಕ್ಟರ್ ಜೊತೆ ಗಲಾಟೆಗಿಳಿದು ಕೋಳಿ ಜಗಳ ಜೋರಾಯಿತು. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಮಹಿಳೆಗೆ ರೂಲ್ಸ್ ಬಗ್ಗೆ ಹೇಳಿದರೂ ಮಹಿಳೆ ಹಾಗೂ ಕಂಡಕ್ಟರ್ ಕೋಳಿ ಜಗಳ ನಿಲ್ಲದೆ ಸಾಗಿದ ಪ್ರಸಂಗ ನಡೆದಿದೆ.