ನ್ಯೂಸ್ ನಾಟೌಟ್ : ವ್ಯಾಲಂಟೈನ್ಸ್ ಡೇ ಬಂದ್ರೆ ಅದರ ಮರುದಿನ ಹಲವು ಸ್ವಾರಸ್ಯಕರ ಘಟನೆಗಳು ವರದಿಯಾಗುವುದು ಸಹಜ. ಪ್ರೇಮಿಗಳ ದಿನದಂದು ತಮ್ಮ ಪ್ರೇಯಸಿಗೆ ಗುಲಾಬಿ ಹೂ, ಟೆಡ್ಡಿ ಬೇರ್, ಚಾಕೋಲೇಟ್, ಸಿಹಿ ತಿನಿಸು.. ಹೀಗೆ ಹಲವು ರೀತಿಯ ಉಡುಗೊರೆಗಳನ್ನು ಕಳುಹಿಸುತ್ತಾರೆ.
ಆದರೆ, ಇಲ್ಲೊಬ್ಬ ಹಲವರಿಗೆ ಪ್ರೀತಿಯ ಉಡುಗೊರೆ ಕಳುಹಿಸಿ ಸಿಕ್ಕಿ ಬಿದ್ದಿದ್ದಾನೆ. ದಿಲ್ಲಿಯ ವ್ಯಕ್ತಿಯೊಬ್ಬ ಹೊಸ ರೀತಿಯ ಪ್ರಯತ್ನ ಮಾಡಿ ಗಮನ ಸೆಳೆದಿದ್ದಾನೆ. ಆತನ ಸಾಹಸವನ್ನು ಫುಡ್ ಡೆಲಿವರಿ ಸಂಸ್ಥೆ ಝೊಮ್ಯಾಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಹೊಸ ದಿಲ್ಲಿ ಮೂಲದ ತರುಣ್ ಎಂಬ ತರುಣ, ಬರೋಬ್ಬರಿ 16 ವಿಳಾಸಗಳಿಗೆ ಝೊಮ್ಯಾಟೋ ಮೂಲಕ ಕೇಕ್ ಕಳಿಸಿದ್ದನಂತೆ!
ಎಲ್ಲ ಕೇಕ್ಗಳಲ್ಲೂ ಒಂದೇ ರೀತಿಯ ಸಂದೇಶ ಬರೆಸಿದ್ದನಂತೆ. ಎಲ್ಲಾ 16 ವಿಳಾಸಗಳಲ್ಲೂ ಬೇರೆ ಬೇರೆ ಯುವತಿಯರ ಹೆಸರಿಗೆ ತರುಣ್ ಕೇಕ್ ಕಳಿಸಿದ್ದನಂತೆ. ಪ್ರತಿಯೊಂದು ಕೇಕ್ ಮೇಲೆ ‘ತರುಣ್ ಕಡೆಯಿಂದ ವ್ಯಾಲಂಟೈನ್ಸ್ ಡೇ ಶುಭಾಯಶಗಳು’ ಎಂಬ ಸಂದೇಶ ಬರೆದಿತ್ತು ಎನ್ನಲಾಗಿದೆ. ಸಾಮಾನ್ಯವಾಗಿ ಫುಡ್ ಡೆಲಿವರಿ ಸಂಸ್ಥೆಗಳು ತಮ್ಮ ಗ್ರಾಹಕರ ವಿವರ ಬಿಟ್ಟು ಕೊಡೋದಿಲ್ಲ.
ಆದರೆ, ಪ್ರೇಮಿಗಳ ದಿನದಂದು 16 ವಿಭಿನ್ನ ವಿಳಾಸಗಳಿಗೆ ಕೇಕ್ ಕಳಿಸಿದ ಈ ಖತರ್ನಾಕ್ ಪ್ರೇಮಿಯ ಹೆಸರನ್ನು ಬಯಲು ಮಾಡಿರುವ ಝೊಮ್ಯಾಟೋ, ತರುಣನ ಸಾಹಸವನ್ನು ಬಯಲು ಮಾಡಿದೆ! ಈ ಕುರಿತಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ (ಎಕ್ಸ್) ಸಂದೇಶ ಪ್ರಕಟಿಸಿದ್ದು, ತನ್ನ ಪರಿಶೀಲಿಸಿದ ಖಾತೆಯಲ್ಲಿ ಈ ಕುರಿತಾದ ಮಾಹಿತಿ ಹಂಚಿಕೊಂಡಿದೆ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಇನ್ನೂ ಕೆಲವರು ತಮ್ಮ ಸ್ನೇಹಿತರಿಗೆ ಟ್ಯಾಗ್ ಮಾಡಿ ಹಾಸ್ಯ ಮಾಡಿದ್ದಾರೆ.