ನ್ಯೂಸ್ ನಾಟೌಟ್: ಬಿಜೆಪಿ ಹಿರಿಯ ನಾಯಕ , ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ಕೇಂದ್ರ ಸರ್ಕಾರದಿಂದ ಭಾರತ ರತ್ನ ಘೋಷಣೆ ಮಾಡಲಾಗಿದೆ. ದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಭಾರತ ರತ್ನ’ ನೀಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
ಈ ಕುರಿತು ಟ್ವಿಟ್ಟರ್ ಖಾತೆ ಮೂಲಕ ‘ಶ್ರೀ ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ ಮಾಡಲಾಗುವುದು ಎಂಬ ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಈ ಗೌರವಕ್ಕೆ ಪಾತ್ರರಾಗುತ್ತಿರುವ ಕುರಿತು ಅವರೊಂದಿಗೆ ಮಾತನಾಡಿ, ಅಭಿನಂದಿಸಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಅಡ್ವಾಣಿ ಅವರಿಗೆ ಪುಷ್ಪಗುಚ್ಛ ನೀಡುತ್ತಿರುವ ಚಿತ್ರವನ್ನು ನೀವು ನೋಡಬಹುದು.ಈ ಫೋಟೊದೊಂದಿಗೆ ಅವರು ಈ ವಿಶೇಷ ಮಾಹಿತಿಯನ್ನು ಹಂಚಿಕೊಂಡಿರುವ ಪ್ರಧಾನಿ, ‘ನಮ್ಮ ಕಾಲದ ಅತ್ಯಂತ ಆದರಣೀಯ ಆಡಳಿತಗಾರಲ್ಲಿ ಒಬ್ಬರಾದ ಅಡ್ವಾಣಿ ಅವರು, ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಚಿರಸ್ಥಾಯಿಯಾದದ್ದು. ತಳಮಟ್ಟದಿಂದ ಆರಂಭವಾದ ಅವರ ಜೀವನ ದೇಶದ ಉಪ ಪ್ರಧಾನಿಯಾಗುವವರೆಗೂ ಸಾಗಿದೆ’ ಎಂದು ಶ್ಲಾಘಿಸಿದ್ದಾರೆ.
‘ದೇಶದ ಗೃಹ ಸಚಿವರಾಗಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಂತ್ರಿಯಾಗಿ ಪ್ರಸಿದ್ಧಿ ಪಡೆದವರು. ಅವರ ಸಂಸದೀಯ ಪಾಲ್ಗೊಳ್ಳುವಿಕೆಯು ಆದರ್ಶಪ್ರಾಯವಾದದ್ದು’ ಎಂದು ಬರೆದುಕೊಂಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಉಪ ಪ್ರಧಾನಿಯಾಗಿ ಎಲ್ಕೆ ಅಡ್ವಾಣಿ ಕಾರ್ಯನಿರ್ವಹಿಸಿದ್ದಾರೆ. 90 ರ ದಶಕದಲ್ಲಿ ದೇಶದಾದ್ಯಂತ ಹಮ್ಮಿಕೊಂಡಿದ್ದ ರಥಯಾತ್ರೆ ಮೂಲಕ ರಾಷ್ಟ್ರದಾದ್ಯಂತ ಸಂಚಲನ ಮೂಡಿಸಿದ್ದ ಎಲ್ಕೆ ಅಡ್ವಾಣಿ, ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾಗಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಹ ಭಾರತ ರತ್ನ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಅವರ ಸಮಕಾಲೀನ ರಾಜಕೀಯ ಧುರೀಣ ಅಡ್ವಾಣಿ ಅವರೂ ಭಾರತ ರತ್ನ ಪುರಸ್ಕಾರಕ್ಕೆ ಭಾಜನರಾದಂತಾಗಿದೆ.