ಈಗೀಗ ಎರಡು ದಿನಗಳ ಹಿಂದಿನ ಕಥೆಯಿದು. ನಮ್ಮ ತಂಡದವರು ಸಂಜೆಯಾಗುತ್ತಲೇ ಓಡಿ ಬಂದು ಹೇಳಿದ್ರು ..’ಸರ್.. ಬಂಟಮಲೆ ಕಾಡಿನ ತಪ್ಪಲಿನಿಂದ ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರನಿಗೆ ತೀರ್ಥ ತೆಗೆದುಕೊಂಡು ಬರ್ತಾರಂತೆ. ಅದು ಕೂಡ ನಾಗತೀರ್ಥವಂತೆ..! ಕಾಡಿನೊಳಗೆ ಸುಮಾರು ದೂರ ನಡೆದುಕೊಂಡೇ ಹೋಗಬೇಕಂತೆ ಅಂತ. ‘ಹೌದಾ..ಇಂಟ್ರೆಸ್ಟಿಂಗ್ ಆಗಿದೆ. ನಾವು ಯಾಕೆ ಅದನ್ನೊಮ್ಮೆ ಕಣ್ಣಾರೆ ನೋಡಬಾರದು. ಎಷ್ಟು ಜನ ಹೋಗ್ತಾರಂತೆ’ ಅಂತ ನಾನು ಮರು ಪ್ರಶ್ನೆ ಹಾಕಿದೆ. ‘ಒಂದು ಮೂವತೈದರಿಂದ ನಲವತ್ತು ಜನ ಇರಬಹುದು. ನಡೆದುಕೊಂಡೇ ಹೋಗಬೇಕಂತೆ, ಹೋಗುವುದಿದ್ದರೆ ನಾವು ನಾಳೆ ಬೆಳಗ್ಗೆ ಆರು ಗಂಟೆಗೆ ಹೊರಡಬೇಕಾಗುತ್ತದೆ ಅಂದ್ರು.
ತಡಮಾಡದೆ ನಮ್ಮ ತಂಡದ ಸದಸ್ಯರೊಬ್ಬರ ಕಾರನ್ನು ಏರಿಕೊಂಡು ಮರುದಿನ ಬೆಳ್ ಬೆಳಗ್ಗೆ ನಾವು ಸುಳ್ಯ ತಾಲೂಕಿನಲ್ಲಿರುವ ಪಂಜದತ್ತ ಹೊರಟೆವು. ಅಲ್ಲಿಗೆ ಹೋದವರಿಗೆ ಆಶ್ವರ್ಯ ಕಾದಿತ್ತು. ಆಫ್ ರೋಡ್ ನಲ್ಲಿ ಕಷ್ಟಪಟ್ಟುಕೊಂಡು ಕಾರನ್ನು ಡ್ರೈವ್ ಮಾಡಬೇಕಾಯಿತು. ಹೊಸ ಕಾರು ಬೇರೆ..! ನನ್ನ ಮೇಲೆ ಕೋಪ ಮಾಡಿಕೊಳ್ಳದೆ ಕಾರಿನ ಮಾಲಕರು ಗೇರ್ ಬದಲಾಯಿಸುತ್ತಾ ಗುಡ್ಡದ ಮೇಲೆ ಗಟ್ಟಿ ಮನಸ್ಸು ಮಾಡಿಕೊಂಡು ಕಾರು ಏರಿಸಿಕೊಂಡು ಬಂದರು. ಈ ಸಮಯದಲ್ಲಿ ಅವರಿಗೊಂದು ದೊಡ್ಡ ಧನ್ಯವಾದಗಳನ್ನು ಹೇಳಲೇ ಬೇಕು. ಹಾಗೆ ನಮ್ಮಿಂದ ಮುಂದೆ ಜೀಪ್ ಮೂಲಕ ಹೋಗಿದ್ದ ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯವರು, ಅರ್ಚಕರು ಕಾಲ್ನಡಿಗೆ ಯಾತ್ರೆ ಆರಂಭವಾಗುವ ಸ್ಥಳದಲ್ಲಿ ಕಾದು ನಿಂತಿದ್ದರು. ಅಲ್ಲಿಂದ ನಂತರ ನಮ್ಮ ಪ್ರಯಾಣ ದಟ್ಟ ಕಾಡಿನೊಳಗೆ ಅವರೊಂದಿಗೆ ಆರಂಭವಾಯಿತು.
ಅಮೆಜಾನ್ ಕಾಡು ವಿಶ್ವದಲ್ಲೇ ಅತ್ಯಂತ ದಟ್ಟ ಕಾಡು ಅನ್ನೋದನ್ನ ಕೇಳಿದ್ದೆ. ಅಲ್ಲಿನ ಮರಗಳು ದಟ್ಟವಾಗಿರುತ್ತದೆ, ಸೂರ್ಯನ ಕಿರಣಗಳು ಕೂಡ ಭೂಮಿಗೆ ಬೀಳೋದಿಲ್ಲ. ಒಂದು ಮಳೆ ಹನಿಯೂ ಭೂಮಿಯನ್ನು ಸೋಕಲು ಆ ಕಾಡಿನಲ್ಲಿ ಕನಿಷ್ಟ ಎಂದರೂ ೧೦ ನಿಮಿಷವಾದರೂ ಬೇಕಾಗುತ್ತೆ ಅನ್ನೋದನ್ನು ತಿಳಿದುಕೊಂಡಿದ್ದೆ. ನನಗೆ ಬಂಟಮಲೆಯ ತಪ್ಪಲನ್ನು ಏರುವಾಗ ನೆನಪಾಗಿದ್ದು ‘ಅಮೆಜಾನ್’ ಕಾಡು. ಬೆಳಗ್ಗೆ ೭.೩೦ರ ಹೊತ್ತಿಗೆ ನಮ್ಮ ಪ್ರಯಾಣ ಆರಂಭಿಸಿದ್ದೆವು. ಸುಮಾರು ಕಾಡಿನೊಳಗೆ ಎರಡು ಕಿ.ಮೀ. ದೂರದ ಪ್ರಯಾಣ. ಕಡಿದಾದ ದಾರಿ, ಅಲ್ಲಲ್ಲಿ ಕುರುಚಲು ಗಿಡಗಂಟಿಗಳು, ಮುಳ್ಳು ಗುತ್ತಿಗಳು ಪ್ರಯಾಣದುದ್ದಕ್ಕೂ ನಮಗೆ ಎದುರಾದವು. ಜೊತೆಗೆ ಲೀಚ್ ಅಥವಾ ಉಂಬುರು ಕೂಡ..! (ಒಂದು ಜಾತಿಯ ರಕ್ತ ಹೀರುವ ಜೀವಿ). ನಡೆಯುವ ಹುಮ್ಮಸ್ಸಿನಲ್ಲಿ ಲೀಚ್ ವೊಂದು ನನ್ನ ಕಾಲಿಗೆ ಕಚ್ಚಿದ್ದೇ ಗೊತ್ತಾಗಿರಲಿಲ್ಲ. ಕಾಲಿನಲ್ಲಿ ರಕ್ತ ಹಾಗೆ ಒಸರುತ್ತಿತ್ತು. ಮತ್ತೊಂದು ಕಡೆ ಇನ್ನೆರಡು ಲೀಚ್ ಕಾಲಿನ ರಕ್ತ ಹೀರುವುದಕ್ಕೆ ಸಿದ್ಧವಾಗಿದ್ದವು. ಅವನ್ನೆಲ್ಲ ಕಡ್ಡಿಯಿಂದ ತೆಗೆದು ಮುಂದಕ್ಕೆ ಸಾಗಿದೆ. ಇದೇ ವೇಳೆ ಜೊತೆಗೆ ಹೆಜ್ಜೆ ಹಾಕುತ್ತಿದ್ದ ಹಿರಿಯರು ಹೇಳಿದ್ರು, “ಅದ್ ಕಚ್ಚಿರೆ ಒಳ್ಳೆದು, ಹಾಳ್ ರಕ್ತ ಎಲ್ಲ ಹೋದೆ’ (ಅದು ಕಚ್ಚಿದ್ರೆ ಒಳ್ಳೆಯದು ಹಾಳು ರಕ್ತವೆಲ್ಲ ಹೋಗುತ್ತೆ) ಅಂತ. ಹಾಗೆ ನಸುನಗುತ್ತಾ ನಾವು ತಾಳ್ಮೆಯಿಂದ ಅವರೊಂದಿಗೆ ಹೆಜ್ಜೆ ಹಾಕಿದೆವು.
ಈ ವೇಳೆ ದಾರಿಯುದ್ದಕ್ಕೂ ಉತ್ಸವ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರು ಹಾಗೂ ದೇವಿ ಪ್ರಸಾದ್ ಜಾಕೆ ನಮ್ಮೊಂದಿಗೆ ಹಲವಾರು ವಿಚಾರಗಳನ್ನು ಹಂಚಿಕೊಂಡರು. ನಮ್ಮೊಂದಿಗೆ ಮಾತನಾಡುತ್ತಾ ಬಂಟಮಲೆಯನ್ನು ಏರುತ್ತಿದ್ದ ಅವರನ್ನು ನಾನು ‘ಸಮಯ ಎಷ್ಟಾಯಿತು’ ಎಂದು ಕೇಳಿದೆ. ‘ಸುಮಾರು ಒಂಭತ್ತುವರೆ’ ಅಂದರು ಜಾಕೆಯವರು. ಆಗ ತಾನೆ ಬೆಳಗ್ಗೆ ಆಗಿರುವಂತೆ ಕಾಣಿಸುತ್ತಿತ್ತು, ಸುತ್ತಲು ಕತ್ತಲು ಆವರಿಸಿತ್ತು. ಕತ್ತೆತ್ತಿ ಒಂದು ಸಲ ಮೇಲೆ ನೋಡಿದೆ. ಸೂರ್ಯನ ಕಿರಣಗಳು ದೈತ್ಯ ಮರಗಳನ್ನು ಬೆಚ್ಚಗೆ ಅಪ್ಪಿಕೊಂಡಿದ್ದವು. ಸ್ವಲ್ಪವೂ ಸೂರ್ಯ ಕಿರಣ ನೆಲಕ್ಕೆ ಬೀಳುತ್ತಿರಲಿಲ್ಲ. ಇದೆಲ್ಲವನ್ನು ನೋಡಿದ ನನಗೆ ಆಶ್ವರ್ಯವಾಯಿತು. ಈ ಕಾಡಿನ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಉಂಟಾಯಿತು. ತಕ್ಷಣ ಈ ಕಾಡಿಗೆ ‘ಬಂಟಮಲೆ’ ಅನ್ನುವ ಹೆಸರು ಏಕೆ ಬಂತು ಎಂದು ದೇವಿ ಪ್ರಸಾದ್ ಜಾಕೆ ಅವರನ್ನು ಕೇಳಿದೆ. ಇದಕ್ಕೆ ಉತ್ತರಿಸಿದ ಅವರು, ‘ಸುಮಾರು ವರ್ಷಗಳ ಹಿಂದೆ ಇಲ್ಲಿ ಬ್ರಿಟಿಷರ ಪ್ರಭಾವ ಇತ್ತಂತೆ, ಬ್ರಿಟಿಷರನ್ನು ಬಂಟದುಂಬಿಗಳು ಓಡಿಸಿದವು ಅನ್ನುವ ಕಾರಣಕ್ಕೆ ಕಾಡಿಗೆ ಬಂಟಮಲೆ ಅನ್ನುವ ಹೆಸರು ಬಂತಂತೆ ಅನ್ನುವ ಮಾತಿದೆ. ಅಲ್ಲದೆ ಈ ಬಂಟಮಲೆಯ ಸುತ್ತ ಇಂತಹ ಅನೇಕ ಕಥೆಗಳಿವೆ’ ಎಂದು ಉಲ್ಲೇಖಿಸಿದರು. ಹಾಗಾದರೆ ಈಗ ನಾವು ಪರಿವಾರ ಪಂಚಲಿಂಗೇಶ್ವರನಿಗೆ ತೀರ್ಥ ತರುವುದಕ್ಕೆ ಹೋಗುತ್ತಿದ್ದೇವಲ್ಲ. ಆ ಸ್ಥಳಕ್ಕೆ ನಾಗತೀರ್ಥ ಎಂದು ಹೆಸರು ಬರಲು ಏನು ಕಾರಣ ಎಂದು ಮರು ಪ್ರಶ್ನೆ ಹಾಕಿದೆ. ಇದಕ್ಕೆ ಉತ್ತರಿಸಿದ ಅವರು, ‘ಅಲ್ಲೊಂದು ಕಲ್ಲು ಇದೆ. ಅದು ನಾಗದೇವರ ರೂಪದಲ್ಲಿ ಇದೆ. ಆ ಕಲ್ಲಿನ ಶಿರದ ಭಾಗಕ್ಕೆ ನೀರು ಬೀಳುವುದರಿಂದ ಅಲ್ಲಿಗೆ ನಾಗತೀರ್ಥ ಅನ್ನುವ ಹೆಸರು ಬಂತೆಂದು’ ತಿಳಿಸಿದರು. ವರ್ಷಕ್ಕೊಮ್ಮೆ ಈ ತಪ್ಪಲಿಗೆ ಬಂದು ನಾಗತೀರ್ಥವನ್ನು ಬಿಂದಿಗೆಯಲ್ಲಿ ಅರ್ಚಕರು ತುಂಬಿಸಿಕೊಂಡು ಅದನ್ನು ಪಂಜದ ಪಂಚಲಿಂಗೇಶ್ವರ ಸನ್ನಿಧಿಗೆ ತಂದು ಅಭಿಷೇಕ ಮಾಡುತ್ತಾರೆ ಅನ್ನುವುದನ್ನು ತಿಳಿದಾಗ ಒಂದು ಕ್ಷಣ ಮೈ ರೋಮಾಂಚನವಾದ ಅನುಭವವಾಯಿತು.
ಈ ನಾಗತೀರ್ಥ ಉದ್ಭವ ಸ್ಥಳದಿಂದ ತೊರೆಯಾಗಿ ಹರಿಯುತ್ತದೆ. ಬಳಿಕ ಕುಮಾರಧಾರ ನದಿಯನ್ನು ಸೇರುತ್ತದೆ. ಸುಳ್ಯ ತಾಲೂಕಿನ ಕೇಂದ್ರವಾಗಿರುವ ಬಂಟಮಲೆಯ ತಪ್ಪಲಿನಿಂದ ಹರಿಯುವ ನಾಗತೀರ್ಥ ಹಲವಾರು ಗ್ರಾಮಗಳ ಜೀವಜಲ ಅನ್ನೋದು ವಿಶೇಷ. ಬಂಟಮಲೆಯ ನಾಗತೀರ್ಥದ ನೀರು ನಿಂತರೆ ಪಂಜ ಸೇರಿದಂತೆ ಸುತ್ತಮುತ್ತಲಿನ ಊರೇ ನೀರಿಗಾಗಿ ಪರದಾಡಬೇಕಾಗುತ್ತದೆ. ಆದರೆ ಸಾವಿರ ಸೀಮೆಯ ಪಂಚಲಿಂಗೇಶ್ವರ ಶಕ್ತಿ ಕೇಂದ್ರವಾಗಿರುವ ನಾಗತೀರ್ಥದಲ್ಲಿ ವರ್ಷ ಪೂರ್ತಿ ನೀರು ಇರುತ್ತದೆ. ಒಂದು ದಿನವೂ ನೀರು ಬತ್ತಿಲ್ಲವಂತೆ. ಅಂತಹ ಕ್ಷೇತ್ರದಲ್ಲಿ ಜಾತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಈಶನ ವೈಭವ ಕಾಣುವುದಕ್ಕೆ ಭಕ್ತಾಧಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಕ್ಷಣದ ನೇರ ಪ್ರಸಾರವನ್ನು ಫ್ರೆಬ್ರವರಿ ೬ರಂದು ನಮ್ಮ ನ್ಯೂಸ್ ನಾಟೌಟ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ. ಎಲ್ಲರಿಗೂ ಶುಭವಾಗಲಿ, ಶರಣು ಸ್ವಾಮಿ ಪಂಜ ಪಂಚಲಿಂಗೇಶ್ವರ.