ನ್ಯೂಸ್ ನಾಟೌಟ್ : ಸಾಮಾಜಿಕ ಜಾಲತಾಣ ಅನ್ನೋದು ಈಗಿನ ಯುವಜನತೆಗೆ ವಿಶೇಷ ವೇದಿಕೆಯಾಗಿ ಪರಿಣಮಿಸಿದೆ. ಹಲವಾರು ಮಂದಿ ಸಾಮಾಜಿಕ ಜಾಲತಾಣಗಳ ಮೂಲಕ ಉದ್ಯೋಗವನ್ನೇ ಕಂಡು ಕೊಂಡಿದ್ದಾರೆ.ಅದರಲ್ಲೂ ಕೆಲವರಂತು ರೀಲ್ಸ್ ಮೂಲಕ ತಮ್ಮಲ್ಲಿ ಅಡಕವಾಗಿರುವ ಪ್ರತಿಭೆಗೆ ವೇದಿಕೆಯಾಗುತ್ತಿದ್ದಾರೆ.ಅದರಲ್ಲೂ ಕೆಲವೊಂದು ಟ್ರೆಂಡ್ಗಳು ಹುಟ್ಟುತ್ತಲೇ ಇದೆ. ಇದೀಗ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ʼಕರಿಮಣಿ ಮಾಲೀಕ ನೀನಲ್ಲ..” ಎನ್ನುವ ಹಾಡಿನ ನೂರಾರು ರೀಲ್ಸ್ ಗಳು ಕಾಣ ಸಿಗುತ್ತದೆ.ಹಾಗಾದರೆ ಈ ಹಾಡು ವೈರಲ್ ಆಗಲು ಕಾರಣವೇನು ಅನ್ನೊದನ್ನು ತಿಳಿದು ಕೊಳ್ಳೋಣ ಬನ್ನಿ..
ಈ ಹಾಡು 25 ವರ್ಷಗಳ ಹಿಂದೆ ಭಾರಿ ಸದ್ದು ಮಾಡಿತ್ತು.ಆದರೆ ಇಷ್ಟೊಂದು ಜನಪ್ರಿಯ ಆಗಿರಲಿಲ್ಲ.ಏಕೆಂದರೆ ಆಗ ಸೋಶಿಯಲ್ ಮೀಡಿಯಾನೇ ಇರಲಿಲ್ಲ.ಇಂದು ಈ ಹಾಡು ರೀಲ್ಸ್ ನಲ್ಲೇ ಅತೀ ಬೇಗ ಜನಪ್ರಿಯಗೊಳ್ಳುತ್ತಿದೆ.ಬಹುತೇಕ ಜನರಿಗೆ ʼಕರಿಮಣಿ ಮಾಲೀಕ ನೀನಲ್ಲ” ಎನ್ನುವ ಹಾಡಿನ ಹಿನ್ನೆಲೆ ಹಾಗೂ ಹಾಡು ಹೇಗೆ ಹುಟ್ಟಿತು, ಯಾವ ಸಿನಿಮಾದೆಂದು ಗೊತ್ತಿಲ್ಲ. ಗೂಗಲ್ ಮಾಡಿ ಸಂಪೂರ್ಣ ಹಾಡನ್ನು ಹುಡುಕುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ಮಕ್ಕಳು ಈ ಬಗ್ಗೆ ತಿಳಿದು ಕೊಳ್ಳಲು ಹೆಚ್ಚು ಕಾತುರರಾಗಿದ್ದಾರೆ.
1999 ರಲ್ಲಿ ಬಂದ ʼಉಪೇಂದ್ರʼ ಸಿನಿಮಾದ ಹಾಡಿದು. ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪ್ಪಿ ಜೊತೆ ಪ್ರೇಮ, ರವೀನಾ ಟಂಡನ್ ಹಾಗೂ ದಾಮಿನಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಅಂದಿನ ಕಾಲದಲ್ಲಿ ಗುರುಕಿರಣ್ ಹಾಗೂ ಉಪೇಂದ್ರ ಅವರ ಕಾಂಬಿನೇಶನ್ನಲ್ಲಿ ಮೂಡಿ ಸೂಪರ್ ಹಿಟ್ ಸಿನಿಮಾ ಜತೆಗೆ ಹಾಡು.ಆಗಷ್ಟೇ ಉಪೇಂದ್ರ ಅವರ ʼಎʼ ಸಿನಿಮಾಕ್ಕೆ ಗುರುಕಿರಣ್ ಅವರು ಮ್ಯೂಸಿಕ್ ನೀಡಿದ್ದರು. ಸಿನಿಮಾದಂತೆ, ಸಿನಿಮಾದ ಹಾಡು ಕೂಡ ಸದ್ದು ಮಾಡಿತ್ತು.ಇದಾದ ಬಳಿಕ ಬಂದ ʼಉಪೇಂದ್ರʼ ಸಿನಿಮಾಕ್ಕೂ ಗುರುಕಿರಣ್ ಅವರೇ ಮ್ಯೂಸಿಕ್ ನೀಡಿದ್ದರು. ಈ ಸಿನಿಮಾದಲ್ಲಿ ʼಮಸ್ತ್ ಮಸ್ತ್ ಹುಡುಗಿ ಬಂದ್ಲುʼ, ʼ ಓಳು ಬರಿ ಓಳುʼ ಹಾಗೂ ʼಓ ನಲ್ಲ ನೀನಲ್ಲʼ ಹಾಡುಗಳು ಸಖತ್ ಹಿಟ್ ಆಗಿತ್ತು. ಎಲ್ಲಿಯವರೆಗೆ ಅಂದ್ರೆ ಇಂದಿಗೂ ಈ ಹಾಡುಗಳು ಕನ್ನಡದ ಎವರ್ ಗ್ರೀನ್ ಹಿಟ್ ಸಾಲಿಗೆ ಸೇರುತ್ತದೆ.ಈ ಹಾಡನ್ನು ಇಂದಿಗೂ ಕೇಳಿದಾಗ ಮೈ ರೋಮಾಂಚನವಾಗುತ್ತೆ.
ಉಪೇಂದ್ರ ಅವರು ಈ ಹಿಂದೆಯೇ ರಿಯಾಲಿಟೀ ಶೋವೊಂದರಲ್ಲಿ ಈ ಹಾಡಿನ ವಿಶೇಷತೆ ಬಗ್ಗೆ ಹಂಚಿಕೊಂಡಿದ್ದರು.ಒಂದೇ ಶಬ್ದದಲ್ಲಿ ಎರಡೆರಡು ಅರ್ಥ ಕೊಡುವ ಈ ಹಾಡನ್ನು ಶೂಟಿಂಗ್ ಟೈಂನಲ್ಲಿ ನಾವೆಲ್ಲ ಎಂಜಾಯ್ ಮಾಡಿದ್ದೆವು ಎಂದು ಹೇಳಿದ್ದರು. ಆ ಸಮಯಲ್ಲಿ ಉಪೇಂದ್ರ ಹಾಗೂ ನಟಿ ಪ್ರೇಮ ಅವರು ಜೋಡಿಗೆ ಚಂದನವನದಲ್ಲಿ ಬೇಡಿಕೆ ಇತ್ತು. ಇಬ್ಬರ ನಡುವಿನ ಕೆಮೆಸ್ಟ್ರಿ ಆನ್ ಸ್ಕ್ರೀನ್ ಮಾತ್ರವಲ್ಲದೆ, ಇಬ್ಬರ ನಡುವೆ ಏನೋ ನಡೀತಿದೆ ಎನ್ನುವ ಗುಸು ಗುಸು ಮಾತು ಅಂದು ಗಾಂಧಿನಗರದಲ್ಲಿ ಹರಿದಾಡಿತ್ತು.ಈ ಹಾಡಿನ ಹಿಂದಿನ ಕಥೆಯನ್ನು ಗುರು ಕಿರಣ್ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. “ಪ್ರೇಮ ಹಾಗೂ ತಮ್ಮ ನಡುವೆ ಏನೋ ನಡೀತಿದೆ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡುವ ಸಲುವಾಗಿ ಈ ಹಾಡು ಹುಟ್ಟಿಕೊಂಡಿತು. ಉಪ್ಪಿ ಅವರು ಹಾಡಿನ ಮೂಲಕ ಇದಕ್ಕೆ ಉತ್ತರ ನೀಡಬೇಕೆಂದು ಅಂದುಕೊಂಡಿದ್ದರು. ಏನಿಲ್ಲ ಪದ ಮೊದಲು ಟ್ಯೂನ್ ಆಯಿತು. ಇದು ಎರಡು ಅರ್ಥ ನೀಡುತ್ತದೆ. ಏನೇನಿಲ್ಲ? ಏನೇನೂ ಇಲ್ಲ? ಎನ್ನುವ ಎರಡೂ ಅರ್ಥವನ್ನು ನೀಡುತ್ತದೆ. ಹಾಗಾಗಿ ಈ ಪದ ಮೊದಲು ಟ್ಯೂನ್ ಆಯಿತು” ಗುರುಕಿರಣ್ ಹೇಳಿದ್ದಾರೆ.
ಮಂಗಳೂರಿನ ರೆಸಾರ್ಟ್ ವೊಂದಕ್ಕೆ ಉಪ್ಪಿ ನಾನು ಹಾಗೂ 8 -10 ಮಂದಿ ಹೋಗಿದ್ದೆವು, ಅಲ್ಲಿ ಈ ಹಾಡಿಗೆ ಟ್ಯೂನ್ ಹಾಕಲಾಗಿತ್ತು. ವಿಶೇಷವೆಂದರೆ ಈ ಹಾಡು ಕೇವಲ 5 -10 ನಿಮಿಷದಲ್ಲಿ ಸಿದ್ದವಾಗಿತ್ತು. ಉಪ್ಪಿ ಮೊದಲು ʼಏನಿಲ್ಲʼ ಅಂಥ ಸಾಹಿತ್ಯವನ್ನು ಆರಂಭಿಸಿದರು. ಆ ಬಳಿಕ ನಾನು ಪಲ್ಲವಿ ಸಿದ್ದಪಡಿಸಿದೆ” ಎಂದು ಅವರು ಹೇಳಿದ್ದಾರೆ.ವೈರಲ್ ಆಗಿದ್ದು ಹೇಗೆ? : ʼಉಪೇಂದ್ರʼ ಸಿನಿಮಾ ರಿಲೀಸ್ ಆಗಿ 25 ವರ್ಷಗಳೇ ಕಳೆದಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಕರ್ನಾಟದ ಯುವಕನೊಬ್ಬ ಈ ಹಾಡಿನಿಂದ ರೀಲ್ಸ್ ಮಾಡಿದ್ದ, ಅಲ್ಲಿಂದ ಈ ಹಾಡಿನಲ್ಲೇ ನೂರಾರು ರೀಲ್ಸ್ ಬಂದಿವೆ.ತುಂಬಾ ಮಂದಿ ಈ ಹಾಡಿಗೆ ರೀಲ್ಸ್ ಮಾಡುತ್ತಾ ಹೆಜ್ಜೆ ಹಾಕಿದ್ದಾರೆ.