ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡಿದೆ.ಬಾಲ ರಾಮ ಪ್ರಜ್ವಲಿಸುತ್ತಿದ್ದಾನೆ.ಈ ವೈಭವವನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.ಮಾತ್ರವಲ್ಲದೇ ವಿದೇಶಗಳಿಂದಲೂ ಭಕ್ತರು ಹರಿದು ಬರುತ್ತಿದ್ದಾರೆ.ಇದೀಗ ಆಶ್ಚರ್ಯವೆಂಬಂತೆ ಲಕ್ನೋದಿಂದ ಆರು ದಿನಗಳ ಪಾದಯಾತ್ರೆಯನ್ನು ಪೂರ್ಣಗೊಳಿಸಿದ 350 ಮಂದಿ ಮುಸ್ಲಿಂ ಭಕ್ತರು ಅಯೋಧ್ಯೆಗೆ ತಲುಪಿ ರಾಮಮಂದಿರಕ್ಕೆ ಪೂಜೆ ಸಲ್ಲಿಸಿ ಧಾರ್ಮಿಕ ಸೌಹಾರ್ದತೆ ಮೆರೆದ ಘಟನೆ ಬಗ್ಗೆ ವರದಿಯಾಗಿದೆ.
ಆರೆಸ್ಸೆಸ್ ಬೆಂಬಲಿತ ಮುಸ್ಲಿಂ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ನೇತೃತ್ವದ ತಂಡ ಜನವರಿ 25 ರಂದು ಲಕ್ನೋದಿಂದ ಪಯಣ ಆರಂಭಿಸಿತು ಎಂದು ಎಂಆರ್ ಎಂ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಹೇಳಿದ್ದಾರೆ. ಒಟ್ಟು 350 ಮುಸ್ಲಿಂ ಭಕ್ತರ ತಂಡ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುತ್ತಾ , ಕೊರೆಯುವ ಚಳಿಯ ನಡುವೆ ಸುಮಾರು 150 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗಿ ಮಂಗಳವಾರದಂದು ಅಯೋಧ್ಯೆಗೆ ತಲುಪಿದೆ. ರಾತ್ರಿ ಹೊತ್ತು ವಿಶ್ರಾಂತಿಗಾಗಿ ಪ್ರತಿ 25 ಕಿಲೋಮೀಟರ್ಗಳಲ್ಲಿ ನಿಲ್ಲಿಸಿ ಮರುದಿನ ಬೆಳಗ್ಗೆ ತಮ್ಮ ಪ್ರಯಾಣ ಮುಂದುವರಿಸಿದ್ದಾರೆ.
ಆರು ದಿನಗಳ ನಂತರ ಅಯೋಧ್ಯೆ ತಲುಪಿ ಪ್ರತಿಷ್ಠಾಪಿಸಲಾದ ರಾಮ್ ಲಲ್ಲಾ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ. ಮುಸ್ಲಿಂ ಆರಾಧಕರ ಈ ಕಾರ್ಯವು ಏಕತೆ, ಸಮಗ್ರತೆ, ಸಾರ್ವಭೌಮತೆ ಮತ್ತು ಸಾಮರಸ್ಯದ ಸಂದೇಶವನ್ನು ಸಾರುತ್ತದೆ ಎಂದು ಸಯೀದ್ ಹೇಳಿದ್ದಾರೆ.