ನ್ಯೂಸ್ ನಾಟೌಟ್: ಅಯೋಧ್ಯೆಯಲ್ಲಿ (Ayodhya) ಶ್ರೀರಾಮನ (Lord Rama) ಭವ್ಯ ಮಂದಿರ ಲೋಕಾರ್ಪಣೆಗೆ ಕೇವಲ ಎರಡು ದಿನಗಳು ಉಳಿದಿವೆ. ಇದೀಗ ಮಡಿಕೇರಿಯಲ್ಲಿಯೂ ರಾಮನ ವಿಶೇಷತೆ ಮತ್ತು ಆತ ಬಿಟ್ಟು ಹೋದ ಹೆಜ್ಜೆಗುರುತುಗಳಿವೆ ಎನ್ನಲಾದ ಸ್ಥಳವೊಂದು ಮುನ್ನಲೆಗೆ ಬಂದಿದೆ. ಈ ಮೂಲಕ ಕೊಡಗು (Kodagu) ಜಿಲ್ಲೆಗೂ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಲಾದ ಕೆಲವೊಂದು ವಿಚಾರಗಳು ಇದೀಗ ಭಾರಿ ಸುದ್ದಿಯಾಗಿದೆ.
ನಿಮ್ಗೆಲ್ಲಾ ತಿಳಿದಿರುವಂತೆ ವನವಾಸದ ಕಾಲವದು. ಸೀತೆಯನ್ನು ಅರಸುತ್ತಾ ಲಕ್ಷ್ಮಣ ಸಹ ಶ್ರೀರಾಮನ ಜೊತೆಗೆ ಹೋಗುತ್ತಾನೆ.ಆಗ ಕೊಡಗಿಗೆ ರಾಮನೊಂದಿಗೆ ಲಕ್ಷಣ ಕೂಡ ಬಂದಿದ್ದ ಎಂಬ ಐತಿಹ್ಯ ಇದೆ. ಅಷ್ಟೇ ಅಲ್ಲದೇ ಲಕ್ಷ್ಮಣನ ಬಾಣದಿಂದ ಸೃಷ್ಟಿಯಾದ ಜಲವೇ ಇವತ್ತು ಕೊಡಗಿನಿಂದ ಹರಿದು ಬಂದು ಕಾವೇರಿಯನ್ನು ಸೇರುವ ‘ಲಕ್ಷ್ಮಣ ತೀರ್ಥ ನದಿ’ ಎಂದು ಜನ ನಂಬಿದ್ದಾರೆ.
ಇವಿಷ್ಟು ಮಾತ್ರವಲ್ಲದೇ ಶ್ರೀ ರಾಮ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿಗೂ ಬಂದಿದ್ದರು ಅನ್ನೋದಕ್ಕೆ ಸಾಕ್ಷಿಗಳು ಸಿಕ್ಕಿವೆ.ಅಂದು ರಾಮಪುರ ಎಂದೇ ಖ್ಯಾತಿಯಾಗಿದ್ದ ಇಂದಿನ ಕಣಿವೆ ಗ್ರಾಮಕ್ಕೂ ಶ್ರೀರಾಮ, ಲಕ್ಷ್ಮಣ ಹಾಗೂ ಹನುಮಂತ ಬಂದಿದ್ದರೆಂಬ ಪ್ರತೀತಿ ಇದೆ. ಅಷ್ಟೇ ಅಲ್ಲ ಶ್ರೀರಾಮ ಬಂದು ಸಂಧ್ಯಾವಂದನೆ ಮಾಡುವುದಕ್ಕಾಗಿ ಮರಳಿನಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು ಎಂಬುದಕ್ಕೆ ಐತಿಹ್ಯದ ಕುರುಹುಗಳಿವೆ.
ಅಂದು ರಾವಣ ಸೀತೆಯನ್ನು ಅಪಹರಿಸುತ್ತಾನೆ.ಈ ಸಂದರ್ಭ ಆತಂಕಗೊಂಡ ರಾಮ ಸೀತೆಯನ್ನು ಹುಡುಕುತ್ತಾನೆ. ಆಗ ರಾಮ, ಲಕ್ಷ್ಮಣ ಹಾಗೂ ಹನುಮಂತರು ಇಲ್ಲಿನ ಕಾವೇರಿ ನದಿ ದಂಡೆಯಲ್ಲಿ ಇರುವ ವ್ಯಾಘ್ರಮುನಿಯ ಕುಟೀರದಲ್ಲಿ ತಂಗುತ್ತಾರೆ ಎಂದು ಕಥೆ ಹೇಳುತ್ತೆ. ಅಲ್ಲದೆ ಸಂಜೆಯಾಗುತ್ತಲೇ ಸಂಧ್ಯಾವಂದನೆಗೆಂದು ತೆರಳಿದಾಗ ಹನುಮಂತ ಹಾಗೂ ಲಕ್ಷ್ಮಣರು ಶಿವಲಿಂಗವನ್ನು ತರಲು ಕಾಶಿಗೆ ಹೋದವರು ವಾಪಸ್ ಬರುವುದು ತಡವಾಗಿದ್ದರಿಂದ ರಾಮ ಅಲ್ಲಿಯೇ ಮರಳನ್ನು ತಂದು ಶಿವಲಿಂಗವನ್ನು ಮಾಡಿ ಪೂಜಿಸಿದನೆಂದು ಹೇಳಲಾಗುತ್ತದೆ. ನಂತರ ಈ ಶಿವಲಿಂಗಕ್ಕೆ ಚೋಳರ ಕಾಲದಲ್ಲಿ ಕಲ್ಲಿನ ಗುಡಿಯನ್ನು ನಿರ್ಮಿಸಿದರು ಎನ್ನಲಾಗುತ್ತದೆ. ದೇವಾಲಯದಲ್ಲಿ ಇಂದಿಗೂ ಮರಳಿನ ಶಿವಲಿಂಗವಿದೆ. ಇದು ಮರ್ಯಾದಾ ಪುರುಷೋತ್ತಮ ಅಲ್ಲಿಗೆ ಬಂದಿದ್ದ ಅನ್ನೊದಕ್ಕೆ ಸಾಕ್ಷಿ ನುಡಿಯುತ್ತೆ.
ಹೀಗೆ ಕೊಡಗಿನ ಮಟ್ಟಿಗೆ ಇನ್ನೊಂದು ಪ್ರಮುಖ ಸ್ಥಳ ಹಾಗೂ ಪ್ರಮುಖ ದೈವ ತಾಣ ಮತ್ತು ಪ್ರವಾಸಿ ತಾಣಗಳಲ್ಲೊಂದಾದ ಇರ್ಪು ಕ್ಷೇತ್ರ ಕೂಡ ರಾಮ ಭೇಟಿ ನೀಡಿದ ತಾಣವಾಗಿದೆ ಎಂದು ಹೇಳಲಾಗಿದೆ.ಇಲ್ಲಿ ರಾಮ ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದನಂತೆ. ಸೀತೆಯನ್ನು ಅರಸುತ್ತಾ ವಾನರಾದಿಯಾಗಿ ಹೊರಟ ರಾಮ-ಲಕ್ಷ್ಮಣರು ಬ್ರಹ್ಮಗಿರಿಯ ತಪ್ಪಲಿಗೆ ಬರುತ್ತಾರೆ. ಈ ಬೆಟ್ಟ ದಾಟಿದರೆ ಕೇರಳ ಸೀಮೆ ಎದುರಾಗುತ್ತದೆ. ಎಲ್ಲರೂ ಬೆಟ್ಟಗುಡ್ಡಗಳನ್ನು ದಾಟಿ ಮುನ್ನಡೆಯುತ್ತಿದ್ದಾರೆ. ಲಕ್ಷ್ಮಣ ಮಾತ್ರ ಮುಂದಕ್ಕೆ ಹೆಜ್ಜೆಯಿರಿಸದೇ ಅಲ್ಲಿಯೇ ಕುಳಿತುಕೊಂಡನಂತೆ. ಎಂದೂ ಕೂರದ ರಾಮ ಅಂದು ಕುಳಿತ ಸ್ಥಳವನ್ನು ಇರ್ಪು ಎನ್ನಲಾಗಿದೆ ಎಂದು ಕರಿತಾರೆ.
ಇದಾದ ಬಳಿಕ ತನ್ನ ವರ್ತನೆಗೆ ಬೇಸರಗೊಂಡ ಆತ, ಅಣ್ಣ ಶ್ರೀರಾಮನಿಗೆ ಬೇಸರ ಮಾಡಿಬಿಟ್ಟೆ ಎಂಬ ನೋವಿನಲ್ಲಿ ಅಗ್ನಿಕುಂಡ ನಿರ್ಮಿಸಿ ಅದರಲ್ಲಿ ಆತ್ಮಾಹುತಿ ಮಾಡಲು ನಿರ್ಧರಿಸಿದನಂತೆ. ಇದನ್ನು ಕಂಡ ರಾಮ ಆತನಿಗೆ ಸಮಾಧಾನ ಹೇಳಿದ. ನಂತರ ಸಂತಸಗೊಂಡ ಲಕ್ಷ್ಮಣ ತಾನು ನಿರ್ಮಿಸಿದ ಅಗ್ನಿಕುಂಡವನ್ನು ನಂದಿಸಲು ಬಾಣಬಿಟ್ಟನಂತೆ. ಹಾಗೆ ಬಿಟ್ಟ ಬಾಣ ಜಲಧಾರೆಯನ್ನು ಸೃಷ್ಟಿಸಿ ಅಗ್ನಿಕುಂಡವನ್ನು ನಂದಿಸಿತು ಎಂಬ ಪ್ರತೀತಿಯಿದೆ.
ಅಂದು ಲಕ್ಷ್ಮಣ ಸೃಷ್ಟಿಸಿದ ಜಲಧಾರೆಯೇ ಇಂದಿನ ಇರ್ಪು ಜಲಧಾರೆಯಾಗಿದ್ದು, ಇದಕ್ಕೆ ರಾಮನೇ ಲಕ್ಷ್ಮಣತೀರ್ಥವೆಂದು (Lakshmana Theerta) ಹೆಸರಿಸಿದ ಎಂಬುದು ಎಲ್ಲರ ನಂಬಿಕೆಯಾಗಿದೆ. ಇರ್ಪುವಿನಲ್ಲಿರುವ ರಾಮೇಶ್ವರ ದೇವಾಲಯ (Rameshwara Temple) ಕೇರಳಿಗರ ವಾಸ್ತುಶಿಲ್ಪದೊಂದಿಗೆ ವೃತ್ತಾಕಾರದ ಗರ್ಭಗುಡಿಯನ್ನು ಹೊಂದಿದೆ. ಇಂದಿಗೂ ಕರ್ನಾಟಕ, ಕೇರಳದ ಜನರು ಬಂದು ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಾರೆ ಅನ್ನೋದು ವಿಶೇಷ.