ನ್ಯೂಸ್ ನಾಟೌಟ್: ಈ ಹಿಂದೆಯೂ ಸನಾತನ ಧರ್ಮದ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದತಮಿಳುನಾಡು ಕ್ರೀಡಾ ಸಚಿವ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿದ್ದರು. ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು,ಆಯೋಧ್ಯೆಯಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿ ನಿಂತಿರುವ ಶ್ರೀ ರಾಮ ಮಂದಿರ ವಿಚಾರವಾಗಿ ಮಾತನಾಡುತ್ತಾ ಡಿಎಂಕೆ ಯಾವುದೇ ನಂಬಿಕೆ ಅಥವಾ ಧರ್ಮವನ್ನು ವಿರೋಧಿಸುವುದಿಲ್ಲ ಎಂದು ಹೇಳಿದ್ದು, ಮಸೀದಿ ಕೆಡವಿ ಮಂದಿರ ಕಟ್ಟುವುದನ್ನು ನಾವು ಒಪ್ಪುವುದಿಲ್ಲ ಎಂದಿದ್ದಾರೆ. ಡಿಎಂಕೆ ಯಾವುದೇ ನಂಬಿಕೆ ಅಥವಾ ಧರ್ಮವನ್ನು ವಿರೋಧಿಸುವುದಿಲ್ಲ ಎಂದು ಕರುಣಾನಿಧಿ ಅವರು ಯಾವಾಗಲೂ ಹೇಳುತ್ತಿದ್ದರು. ಮಂದಿರ ಕಟ್ಟುವುದು ಸಮಸ್ಯೆಯಲ್ಲ, ಆದರೆ ಮಸೀದಿ ಕೆಡವಿ ಅಲ್ಲಿ ಮಂದಿರ ನಿರ್ಮಿಸುವುದನ್ನು ನಾವು ಒಪ್ಪುವುದಿಲ್ಲ, ಆಧ್ಯಾತ್ಮಿಕತೆ ಮತ್ತು ರಾಜಕೀಯವನ್ನು ಬೆರೆಸಬೇಡಿ ಎಂದು ಉದಯನಿಧಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ನಿರ್ಮಾಣ ಕಾರ್ಯ ನಡೆಯುತ್ತಿದ್ದಉ, ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾಧು-ಸಂತರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವತಃ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿಲಿದ್ದಾರೆ.
ಈ ಹಿಂದೆ ಸನಾತನ ಮತ್ತು ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಉದಯನಿಧಿ ಸ್ಟಾಲಿನ್ ಸುದ್ದಿಯಾಗಿದ್ದರು. ಸ್ಟ್ಯಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಹೋಲಿಸಿದರು. ಸನಾತನ ಸಂಸ್ಥೆಯನ್ನು ವಿರೋಧಿಸುವುದು ಮಾತ್ರವಲ್ಲದೆ ನಿರ್ಮೂಲನೆ ಮಾಡಬೇಕು ಎಂದು ಹೇಳುವ ಮೂಲಕ ಚರ್ಚೆಗ ಕಾರಣರಾಗಿದ್ದರು. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅವುಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕು ಎಂದು ಹೇಳಿದರು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಅವುಗಳನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕು. ಹಾಗೆಯೇ ಸನಾತನವನ್ನೂ ನಾಶಪಡಿಸಬೇಕು ಎಂದಿದ್ದರು.
ಉದಯನಿಧಿ ಸ್ಟಾಲಿನ್ಗೆ ವಂಶಪಾರಂಪರ್ಯವಾಗಿ ರಾಜಕೀಯ ಬಂದಿದೆ. ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ನಾಯಕ ದಿವಂಗತ ಎಂ.ಕರುಣಾನಿಧಿ ಅವರ ಮೊಮ್ಮಗ. ಉದಯನಿಧಿ ಅವರ ತಂದೆ ಎಂ.ಕೆ ಸ್ಟಾಲಿನ್ ಅವರು ಡಿಎಂಕೆ ಮುಖ್ಯಸ್ಥ ಮತ್ತು ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿ. ಕಳೆದ ವರ್ಷವಷ್ಟೇ ಅವರನ್ನು ಸ್ಟಾಲಿನ್ ಸರ್ಕಾರದಲ್ಲಿ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಯಿತು.ಇದಲ್ಲದೇ ಡಿಎಂಕೆ ಯುವ ಘಟಕದ ರಾಜ್ಯ ಕಾರ್ಯದರ್ಶಿಯೂ ಆಗಿದ್ದಾರೆ.