ನ್ಯೂಸ್ ನಾಟೌಟ್ :ನಿನ್ನೆಯಷ್ಟೇ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟಿದ ಹಬ್ಬ.ಈ ಹಿನ್ನಲೆಯಲ್ಲಿ ಅವರ ಹುಟ್ಟುಹಬ್ಬಕ್ಕೆ ಶುಭಕೋರುವ ಬ್ಯಾನರ್ ಕಟ್ಟುವಾಗ ವಿದ್ಯುತ್ ಪ್ರವಹಿಸಿ ಮೂವರು ಅಭಿಮಾನಿಗಳು ದಾರುಣ ಅಂತ್ಯವಾಗಿರುವ ಘಟನೆ ವರದಿಯಾಗಿತ್ತು.ಇದೀಗ ಈ ಘಟನೆಯ ಬೆನ್ನಲ್ಲೇ ಮತ್ತೋರ್ವ ಯಶ್ ಅಭಿಮಾನಿಯೊಬ್ಬ ಕೊನೆಯುಸಿರೆಳೆದ ಘಟನೆ ಸಂಭವಿಸಿದೆ.
ನಿಖಿಲ್ ಕೊನೆಯುಸಿರೆಳೆದ ಯುವಕ.ಗದಗ ತಾಲೂಕಿನ ಬಿಂಕದಕಟ್ಟಿ ನಿವಾಸಿ. ಈತ ಯಶ್ ನೋಡಲು ಬೈಕ್ನಲ್ಲಿ ಹಿಂಬಾಲಿಸಿಕೊಂಡು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಈತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ.
ಗದಗ ಜಿಲ್ಲೆ ಸೊರಣಗಿ ಗ್ರಾಮದಲ್ಲಿ ಯಶ್ ಹುಟ್ಟುಹಬ್ಬದ ಅಂಗವಾಗಿ ತಡರಾತ್ರಿ ಕಟೌಟ್ ಕಟ್ಟಲು ಹೋಗಿ ವಿದ್ಯುತ್ ಸ್ಪರ್ಶದಿಂದ ಮುರಳಿ, ನವೀನ್, ಹನುಮಂತ ಎಂಬ ಮೂವರು ದುರಂತ ಅಂತ್ಯ ಕಂಡಿದ್ದರು. ಇನ್ನುಳಿದ ಮೂವರು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಚಾರ ತಿಳಿದ ಯಶ್ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.
ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಯಶ್ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಯಶ್ ಅವರ ಮತ್ತೊರ್ವ ಅಭಿಮಾನಿ ನಿಖಿಲ್, ಯಶ್ ಅವರು ಕಾರ್ನಲ್ಲಿ ಬರುತ್ತಿರುವುದನ್ನು ನೋಡಿ ಹಿಂಬಾಲಿಸಿದ್ದಾನೆ. ಈ ವೇಳೆ ಪೊಲೀಸ್ ಭದ್ರತಾ ವಾಹನಕ್ಕೆ ನಿಖಿಲ್ ಸ್ಕೂಟಿ ಡಿಕ್ಕಿ ಹೊಡೆದಿದೆ. ಈ ಅಪಘಾತ ಗದಗ ನಗರದ ತೇಜಾನಗರದಲ್ಲಿ ನಡೆದಿದೆ.ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ನಿಖಿಲ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಸದ್ಯ ಆಸ್ಪತ್ರೆ ಬಳಿ ನಿಖಿಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.