ನ್ಯೂಸ್ ನಾಟೌಟ್ : ಸುಳ್ಯ ಭಾಗದಲ್ಲಿ ಚಿರತೆ ಕಾಟ ಜೋರಾಗಿದೆ.ಕಳೆದ ಕೆಲ ಸಮಯಗಳಿಂದ ಸುಳ್ಯದ ಹಲವೆಡೆ ಇಂತಹ ಘಟನೆಗಳು ಮರುಕಳಿಸುತ್ತಿದ್ದು ಮತ್ತೆ ಮತ್ತೆ ಸಂಭವಿಸುತ್ತಲೇ ಇದೆ.ನಿನ್ನೆಯಷ್ಟೇ ಅರಂತೋಡು ಭಾಗದ ಅಡ್ಕಬಳೆ ಎಂಬಲ್ಲಿ ದನದ ಕರುವೊಂದನ್ನು ಚಿರತೆ ಬೇಟೆಯಾಡಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸುವಂತೆ ಮಾಡಿತ್ತು.ಇದೀಗ ಮರ್ಕಂಜ – ಮಡಪ್ಪಾಡಿ ಭಾಗದ ಶೆಟ್ಟಿಮಜಲು ಎಂಬಲ್ಲಿ ಸಾಕು ನಾಯಿಗಳನ್ನು,ದನಗಳನ್ನು ಚಿರತೆ ಬೇಟೆಯಾಡಿರುವ ಬಗ್ಗೆ ವರದಿಯಾಗಿದೆ.
ಜನವಸತಿ ಪ್ರದೇಶದಲ್ಲಿಯೇ ಬಿಂದಾಸ್ ಆಗಿ ಓಡಾಡುತ್ತಿರುವ ಚಿರತೆ ಉಪಟಳಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಈ ಭಾಗದಲ್ಲಿ ಈಗಾಗ್ಲೇ ಮೂರು ದನಗಳು ಕಣ್ಮರೆಯಾಗಿದ್ದು, ಚಿರತೆಯೇ ದನಗಳನ್ನು ಬೇಟೆಯಾಡಿದೆಯೇನೋ ಎನ್ನುವ ಶಂಕೆ ವ್ಯಕ್ತವಾಗಿದೆ.ಇದರಿಂದಾಗಿ ಮರ್ಕಂಜದ ಗ್ರಾಮಸ್ಥರಲ್ಲಿ ಆತಂಕ ಇನ್ನೂ ಹೆಚ್ಚಾಗಿದೆ.ಈ ಬಗ್ಗೆ ಅಲ್ಲಿನ ಗ್ರಾಮಸ್ಥರು ಪ್ರತಿಕ್ರಿಯಿಸಿ ಚಿರತೆಯನ್ನು ಆದಷ್ಟು ಬೇಗ ಹಿಡಿದು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.ಚಿರತೆ ಹಾವಳಿ ಹೀಗೆ ಮುಂದುವರಿದರೆ ಶೀಘ್ರದಲ್ಲಿಯೇ ಪ್ರತಿಭಟನೆ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.ಸದ್ಯ ಅರಣ್ಯಾಧಿಕಾರಿಗಳು ಕೂಡ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಬೋನು ಇಟ್ಟು ಚಿರತೆ ಹಿಡಿಯುವ ಪ್ರಯತ್ನ ಮುಂದುವರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.