ನ್ಯೂಸ್ ನಾಟೌಟ್ :ತಾಯಿ-ಮಗುವಿನ ಸಂಬಂಧ ತುಂಬಾನೇ ಮಹತ್ವಪೂರ್ಣವಾದದ್ದು,ತಾಯಿಗೆ ತನ್ನ ಮಗುವಿನ ಮೇಲೆ ಎಷ್ಟು ಪ್ರೀತಿ ಇರುತ್ತೋ ಅದಕ್ಕಿಂತಲೂ ಹೆಚ್ಚಾಗಿ ಮಗು ತಾಯಿಯನ್ನು ಅವಲಂಬಿತವಾಗಿರುತ್ತೆ ಅನ್ನೋದು ಕೂಡ ನಿಜ..!ಅದು ಮನುಷ್ಯರೇ ಆಗಿರಲಿ, ಪ್ರಾಣಿಗಳೇ ಆಗಿರಲಿ ತಾಯಿ ಮಮತೆ ಎಲ್ಲದಕ್ಕೂ ಮಿಗಿಲು ..ಇದೀಗ ಇಲ್ಲೊಂದು ಕಡೆ ತಾಯಿ ಆನೆಯಿಂದ ಮರಿಯಾನೆಯೊಂದು ಬೇರ್ಪಟ್ಟಿತ್ತು. ಹೀಗೆ ಹಿಂಡಿನಿಂದ ಬೇರ್ಪಟ್ಟ ಆನೆ ಮರಿಯನ್ನು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಕಳೆದ ಒಂದು ದಿನದಿಂದ ವಿಶೇಷ ಮುತುರ್ವಜಿ ವಹಿಸಿ ತಾಯಿ ಜತೆ ಸೇರಿಸುವಲ್ಲಿ ಯಶಸ್ವಿಯಾಗಿರುವ ಅಪರೂಪದ ಘಟನೆ ನಡೆದಿದೆ.ಈ ಮರಿಯಾನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಅರಣ್ಯ ಇಲಾಖೆಯ ಸತತ ಪ್ರಯತ್ನದಿಂದಾಗಿ ಮರಿಯಾನೆ ಮರಳಿ ತಾಯಿ ಮಡಿಲು ಸೇರಿದೆ.ಮಂಡೆಕೋಲು ಗ್ರಾಮದ ಕನ್ಯಾನ ಶಾಲೆಯ ಬಳಿಯಲ್ಲಿ ಗುಂಪಿನಿಂದ ಬೇರ್ಪಟ್ಟ ಮರಿಯಾನೆ ತನ್ನ ಗುಂಪು ಸೇರಿರುವುದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಸಂತಸ ವ್ಯಕ್ತ ಪಡಿಸಿದ್ದಾರೆ.
ಕಳೆದ ಬಾರಿ ಇಂತಹುದೇ ಘಟನೆಯೊಂದು ಅಜ್ಜಾವರದ – ಮಂಡೆಕೋಲಿನಿಂದಲೇ ವರದಿಯಾಗಿತ್ತು. ಸುಳ್ಯದ ಮಂಡೆಕೋಲು ಅಜ್ಜಾವರ ಭಾಗದಲ್ಲಿ ಆನೆಗಳ ಹಿಂಡೊಂದು ಆಹಾರ ಅರಸುತ್ತಾ ಬಂದು ಅಜ್ಜಾವರದ ತುದಿಯಡ್ಕದ ಸಮೀಪದ ಸನತ್ ಕುಮಾರ್ ರೈ ಅವರಿಗೆ ಸೇರಿದ ತೋಟದ ಕೆರೆಗೆ ಬಂದು ಬಿದ್ದಿದ್ದವು. ನಾಲ್ಕು ಆನೆಗಳ ಪೈಕಿ ತಾಯಿ ಆನೆ ಕೆರೆಯಿಂದ ಹೇಗೋ ಮೇಲಕ್ಕೆ ಎದ್ದಿತ್ತು. ಆದರೆ ಮರಿ ಆನೆ ಮತ್ತು ಮತ್ತೊಂದು ದೊಡ್ಡ ಹಾಗೂ ಸಣ್ಣ ಆನೆ ಕೆರೆಯಲ್ಲಿಯೇ ಬಾಕಿ ಆಗಿದ್ದವು, ಸ್ಥಳೀಯರ ಸಹಕಾರ ಹಾಗೂ ಅರಣ್ಯ ಇಲಾಖೆಯ ಸಮಯ ಪ್ರಜ್ಞೆಯಿಂದ ಆನೆಗಳನ್ನು ನೀರಿನಿಂದ ಮೇಲಕೆತ್ತುವ ಪ್ರಯತ್ನ ನಡೆಯಿತು.
ತಡರಾತ್ರಿ ಬಿದ್ದಿದ್ದ ಕಾರಣಕ್ಕೆ ಆನೆಗಳು ತುಂಬಾ ಸುಸ್ತಾಗಿದ್ದವು. ಒಂದು ವರ್ಷದ ಪ್ರಾಯದ ಆನೆಮರಿ ಹಾಗೂ ಮೂರು ತಿಂಗಳ ಆನೆ ಮರಿ ನೀರಿನಲ್ಲಿ ಒದ್ದಾಟ ನಡೆಸುತ್ತಿದ್ದವು. ಕೊನೆಗೂ ಸ್ಥಳೀಯರ ಶ್ರಮದಿಂದ ಒಂದು ವರ್ಷ ಪ್ರಾಯದ ಆನೆ ಮರಿ ಹಾಗೂ ದೊಡ್ಡ ಆನೆಯನ್ನು ರಕ್ಷಿಸಲಾಯಿತು. ಆದರೆ ಮೂರು ತಿಂಗಳ ಮರಿ ಆನೆಗೆ ಕೆರೆಯಿಂದ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊನೆಗೆ ಊರಿನವರು ಹಗ್ಗ ಹಾಕಿ ಆನೆ ಮರಿಯನ್ನು ಮೇಲಕ್ಕೆ ಎಳೆದರು. ಆದರೆ ತಾಯಿ ಆನೆ ಮರಿಯನ್ನು ಸನಿಹಕ್ಕೆ ಸೇರಿಸಿಕೊಳ್ಳದೇ ಮರಿಯಾನೆ ಭಾರಿ ಯಾತನೆ ಅನುಭವಿತ್ತು. ಇದರಿಂದ ಆನೆ ಮರಿ ದಿಕ್ಕು ತಪ್ಪಿದಂತಾಗಿತ್ತು. ಕೊನೆಗೆ ಆನೆ ಮರಿಯನ್ನು ದುಬಾರೆಯ ಸಾಕಾನೆ ಶಿಬಿರಕ್ಕೆ ಶಿಫ್ಟ್ ಮಾಡಲಾಗಿತ್ತಾದರೂ ಮರಿಯಾನೆ ದುರಂತ ಅಂತ್ಯ ಕಂಡಿತ್ತು.