ನ್ಯೂಸ್ ನಾಟೌಟ್: ವ್ಯಕ್ತಿಯೊಬ್ಬರು ಅಡಿಕೆಗೆ ಹಳದಿ ರೋಗ ಬಂದಿದೆ ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಲೆಟ್ಟಿ ಗ್ರಾಮದ ಬಡ್ಡಡ್ಕ ದ ಗೂಡಿಂಜ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ದಿ.ಚಳ್ಳಂಗಾರು ರಾಮಣ್ಣ ಗೌಡ ರವರ ಪುತ್ರ ಜಗದೀಶ್ ಚಳ್ಳಂಗಾರು (58) ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವವರು.
ಮನೆಯವರು ಇಂದು (ಗುರುವಾರ) ಬೆಳಗ್ಗೆ ಎದ್ದು ನೋಡಿದಾಗ ಮನೆಯಲ್ಲಿ ಜಗದೀಶ್ ಅವರು ಇರಲಿಲ್ಲ. ತಕ್ಷಣ ಎಲ್ಲ ಕಡೆ ಹುಡುಕಾಟ ನಡೆಸಿದಾಗ ಮನೆಯ ಮೇಲ್ಭಾಗದಲ್ಲಿರುವ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರಾದ ದಿವಿನ್ ರಾಜ್, ಜೀವನ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕೃಷಿಕರಾಗಿದ್ದರು. ಕಳೆದ ಕೆಲವು ಸಮಯಗಳಿಂದ ಅಡಿಕೆ ಕೃಷಿಗೆ ಅಂಟಿರುವ ಹಳದಿ ರೋಗದಿಂದ ಮನನೊಂದಿದ್ದರು, ಇದು ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಉತ್ತಮ ಕ್ರೀಡಾಪಟುವಾಗಿದ್ದ ಅವರು ಸ್ಥಳೀಯ ಅಯ್ಯಪ್ಪ ಭಜನಾ ಮಂದಿರದ ಸದಸ್ಯರಾಗಿದ್ದರು. ಮಾತ್ರವಲ್ಲ ಬಿಜೆಪಿ ಕಾರ್ಯಕರ್ತರಾಗಿಯೂ ಕೆಲಸ ಮಾಡಿದ್ದರು.