9ನೇ ತರಗತಿ ವಿದ್ಯಾರ್ಥಿಯನ್ನು ಹೊಡೆಯಲು ಗ್ಯಾಂಗ್ ಕರೆತಂದ 7ನೇ ತರಗತಿ ವಿದ್ಯಾರ್ಥಿ..! ಸ್ಥಳದಲ್ಲಿ ಚಾಕು, ಏರ್​ಗನ್​ ಪತ್ತೆ..! ಪೋಷಕರಲ್ಲಿ ಆತಂಕ!

ನ್ಯೂಸ್ ನಾಟೌಟ್: ಖಾಸಗಿ ಶಾಲೆಯೊಂದರ ಇಬ್ಬರು ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯ ವೇಳೆ ಸ್ಥಳದಲ್ಲಿ ಚಾಕು, ಪಂಚ್ ಹಾಗೂ ಏರ್‌ಗನ್ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದ ಘಟನೆ ಜ.1 ರಂದು ರಾಯಚೂರಿನಲ್ಲಿ ನಡೆದಿದೆ. ಶಾಲೆಯೊಂದರ ಮುಂಭಾಗ ಬೆಳಿಗ್ಗೆ 7ನೇ ತರಗತಿ ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೂ ಅವರ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಇತರ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪಶ್ಚಿಮ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಕೆಲ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ಶಾಲಾ ಮುಂಭಾಗ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಗಲಾಟೆಯ ದೃಶ್ಯ ಸೆರೆಯಾಗಿದೆ. “ಗಲಾಟೆ ನಡೆದಿರುವುದು ನಮ್ಮ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ವಿಚಾರಣೆ ಮಾಡುತ್ತಿದ್ದೇವೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಶಾಲೆಯತ್ತ ಧಾವಿಸಿದ ಪೋಷಕರು ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದ ಬಗ್ಗೆ ಗೊತ್ತಾಯಿತು. ಯಾವ ಕಾರಣಕ್ಕೆ ಆಗಿದೆ ಎಂದು ತಿಳಿದಿಲ್ಲ ಎಂದು ಕೆಲ ಪೋಷಕರು ತಿಳಿಸಿದ್ದಾರೆ. ಇದರಲ್ಲಿ ೯ನೇ ತರಗತಿ ವಿದ್ಯಾರ್ಥಿಯ ಕೈಗೆ ಗಾ* ಯಗಳಾಗಿವೆ ಎಂದು ತಿಳಿದು ಬಂದಿದೆ.