ನ್ಯೂಸ್ ನಾಟೌಟ್ : ಪುಣೆಯ ಲಾಡ್ಜ್ವೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳಾ ಟೆಕ್ಕಿಯನ್ನು ತನ್ನ ಪ್ರಿಯಕರನೇ ಗುಂಡಿಕ್ಕಿ ಕೊಂದಿರುವ ಹೃದಯವಿದ್ರಾವಕ ಘಟನೆ ಬಗ್ಗೆ ವರದಿಯಾಗಿದೆ. ಪಿಂಪ್ರಿ ಚಿಂಚ್ವಾಡ್(Pimpri Chinchwad)ನ ಹಿಂಜಾವಾಡಿ ಪ್ರದೇಶದ ಓಯೋ ಟೌನ್ಹೌಸ್ ಹೋಟೆಲ್ನಲ್ಲೇ ಈ ಘಟನೆ ನಡೆದಿದೆ. ಆರೋಪಿ ರಿಷಬ್ ನಿಗಮ್ನನ್ನು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ವಂದನಾ ದ್ವಿವೇದಿ ಪ್ರಿಯಕರನಿಂದ ಹತ್ಯೆಯಾದ ಟೆಕ್ಕಿ. ಹಿಂಜಾವಾಡಿಯ ಪ್ರತಿಷ್ಠಿತ ಐಟಿ ಸಂಸ್ಥೆಯಲ್ಲಿ ವಂದನಾ ಕೆಲಸ ಮಾಡುತ್ತಿದ್ದು, ಕೊಲೆ ಮಾಡಿರುವ ರಿಷಬ್ ನಿಗಮ್ ಉತ್ತರ ಪ್ರದೇಶದ ಲಕ್ನೋ ನಿವಾಸಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 10 ವರ್ಷಗಳಿಂದ ವಂದನಾ ಮತ್ತು ರಿಷಬ್ ಪರಸ್ಪರ ಪರಿಚಿತರಾಗಿದ್ದರು ಎನ್ನಲಾಗಿದೆ. ವಂದನಾಳನ್ನು ಭೇಟಿಯಾಗಲು ರಿಷಬ್ ಪುಣೆಗೆ ಬಂದಿದ್ದ. ಇಬ್ಬರೂ ಜ.25ರಿಂದ ಹಿಂಜಾವಾಡಿಯಲ್ಲಿ ಹೋಟೆಲ್ನಲ್ಲಿಯೇ ತಂಗಿದ್ದರೆಂದು ಹೇಳಲಾಗಿದೆ.
ವಂದನಾಳ ಮೇಲೆ ಅನುಮಾನ ಪಡುತ್ತಿದ್ದ ರಿಷಬ್ ಆಕೆಯನ್ನು ಕೊಲ್ಲುವ ಸಂಚಿನಿಂದಲೇ ಪುಣೆಗೆ ಬಂದಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ರಿಷಬ್, ವಂದನಾಗೆ ಗುಂಡು ಹಾರಿಸಿದ್ದ. ಆಕೆಯನ್ನು ಕೊಂದ ಬಳಿಕ ಆತ ಹೊಟೇಲ್ ಕೊಠಡಿಯಿಂದ ಹೊರಹೋಗಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಸದ್ಯ ಆರೋಪಿ ರಿಷಬ್ ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.