ನ್ಯೂಸ್ ನಾಟೌಟ್ : ನವ ವಿವಾಹಿತೆಯೊಬ್ಬಳು ಪತಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನುವ ಘಟನೆ ಬಗ್ಗೆ ಶಿವಮೊಗ್ಗದಿಂದ ವರದಿಯಾಗಿದೆ.ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ (Dead Body Found) ಪತ್ತೆಯಾಗಿದ್ದು,ತನಿಖೆ ಚುರುಕುಗೊಂಡಿದೆ.
ಶಿವಮೊಗ್ಗದ (Shivamogga News) ತೀರ್ಥಹಳ್ಳಿ ತಾಲೂಕಿನ ದಾಸನಕೊಡಿಗೆ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು,ಶರ್ಮಿತಾ.ಬಿ.ಯು (24) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.ಶರ್ಮಿತಾಳ ರೂಮಿನ ಬಾಗಿಲು ಮುಚ್ಚಿದ್ದು, ಎಷ್ಟೇ ಬಾಗಿಲು ತಟ್ಟಿದ್ದರೂ ತೆರೆಯದೆ ಇದ್ದಾಗ, ಮನೆಯ ಕೆಲಸದವರು ಕಿಟಕಿಯಿಂದ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.ಯುವತಿಯ ಪೋಷಕರು ಆಗಮಿಸಿದ ನಂತರ ಬಾಗಿಲು ಒಡೆಯಲಾಗಿದೆ. ಮೃತದೇಹದ ಬಳಿ ಡೆತ್ ನೋಟ್ ಲಭ್ಯವಾಗಿದೆ. ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ ಎನ್ನಲಾಗಿದೆ.
ಬಿಜ್ಜಳ ಗ್ರಾಮದ ಶರ್ಮಿತಾ 2023ರ ಮಾರ್ಚ್ನಲ್ಲಿ ದಾಸನಕೊಡಿಗೆಯ ವಿದ್ಯಾರ್ಥ್ ಎಂಬಾತನೊಂದಿಗೆ ವಿವಾಹವಾಗಿದ್ದರು.ವಿದ್ಯಾರ್ಥ್ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗದ ಅಮಾವಾಸ್ಯೆಬೈಲು ವಲಯ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾತ್ರಿ ಪಾಳಿ ಕೆಲಸಕ್ಕೆ ಪತಿ ವಿದ್ಯಾರ್ಥ್ ತೆರಳಿದ್ದರು ಎನ್ನಲಾಗಿದೆ. ಶರ್ಮಿತಾಳ ಈ ಸಾವು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬುದರ ಬಗ್ಗೆ ಅನುಮಾನ ಮೂಡಿದೆ.ಸದ್ಯ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.