ನ್ಯೂಸ್ ನಾಟೌಟ್ : ಮೊನ್ನೆಯಷ್ಟೇ ನವವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಮಾಸಿ ಹೋಗುವ ಮುನ್ನವೇ ಇಲ್ಲೊಬ್ಬಳು ಮಧುಮಗಳು ನೇಣಿಗೆ ಶರಣಾಗಿರುವ ಘಟನೆ ಬಗ್ಗೆ ಶಿವಮೊಗ್ಗದಿಂದ ವರದಿಯಾಗಿದೆ. ಇನ್ನೇನು 13 ದಿನ ಕಳೆಯುತ್ತಿದ್ದರೆ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನಡಿತಿತ್ತು.ಅಷ್ಟರಲ್ಲಾಗಲೇ ಯುವತಿ ಈ ನಿರ್ಧಾರಕ್ಕೆ ಬಂದಿದ್ದು ಭಾರಿ ಆಘಾತಕಾರಿ ಎಂದೆನಿಸಿಕೊಂಡಿದೆ.
ಮಗಳ ಮದುವೆಗಾಗಿ ಆ ಪೋಷಕರು ಅದ್ಧೂರಿಯಾಗಿ ತಯಾರಿಯನ್ನು ಮಾಡಿಕೊಂಡಿದ್ದರು. ಅದಾಗಲೇ ಮಗಳ ಮದುವೆ ಕಾರ್ಡ್ ಅನ್ನು ಊರು ತುಂಬ ಹಂಚಿದ್ದರು. ಆದರೆ ಸಂಭ್ರಮದ ಮನೆಯಲ್ಲೀಗ ಸೂತಕ ಛಾಯೆ ಆವರಿಸಿದೆ. ಮದು ಮಗಳಾಗಿ ಹಸೆಮಣೆ ಏರಬೇಕಾದವಳು (Shivamogga News) ಸಾವಿನ ಕದ ತಟ್ಟಿದ್ದಾಳೆ.
ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚೈತ್ರ (26) ಮೃತ ಯುವತಿ. ಚೈತ್ರ ಮನೆಯ ಸ್ನಾನದ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈಕೆಗೆ ಮುಂದಿನ ಫೆಬ್ರವರಿ 4 ರಂದು ವಿವಾಹ ನಿಶ್ಚಯವಾಗಿತ್ತು.ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಎಂಕಾಂ ಪದವಿ ಪಡೆದಿದ್ದ ಚೈತ್ರ ಕಟ್ಟೆಹಕ್ಲಿನ ರಾಮಕೃಷ್ಣ ಮೆಡಿಕಲ್ನಲ್ಲಿ ಕೆಲಸ ಮಾಡುತ್ತಿದ್ದಳು. ನನಗೆ ಆರೋಗ್ಯ ಸಮಸ್ಯೆ ಇದೆ. ಹಾಗಾಗಿ ನನಗೆ ಮದುವೆ ಬೇಡವೆಂದು ವಿರೋಧ ಮಾಡುತ್ತಿದ್ದಳು ಎನ್ನಲಾಗಿದೆ. ಆದರೆ ಮನೆಯವರು ಮನವೊಲಿಸಿದ್ದರು ಎನ್ನಲಾಗಿದೆ.ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.