ನ್ಯೂಸ್ ನಾಟೌಟ್: ಇಂದಿನ ಆಧುನಿಕ ಜಗತ್ತು ತುಂಬಾ ಫಾಸ್ಟ್. ನಮ್ಮೆದುರು ನಡೆದ ಘಟನೆ ಕ್ಷಣ ಮಾತ್ರದಲ್ಲಿ ಹೊರಜಗತ್ತಿಗೆ ತಿಳಿಯುತ್ತದೆ. ಇದಕ್ಕೆಲ್ಲ ಕಾರಣ ಮೊಬೈಲ್ ನೆಟ್ ವರ್ಕ್. ಇಂಟರ್ನೆಟ್, ಮೊಬೈಲ್ ಇಲ್ಲದೆ ಮನುಷ್ಯ ಒಂದು ಕ್ಷಣವೂ ಬದುಕಿರಲಾರ ಅನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿದೆ. ಅಂತಹುದರಲ್ಲಿ ಕೆಲವು ಹಳ್ಳಿಗಳಿಗೆ ಇನ್ನೂ ನೆಟ್ ವರ್ಕ್ ಭಾಗ್ಯವೇ ಇಲ್ಲ ಅಂದ್ರೆ ನಂಬೋದೇ ಕಷ್ಟವಾಗುತ್ತೆ. ಹೌದು, ನಾನು ಭೇಟಿ ನೀಡಿದ ಆ ಹಳ್ಳಿ ಜನರಲ್ಲಿ ಮೊಬೈಲ್ ಇದೆ. ಆದರೆ ನೆಟ್ ವರ್ಕ್ ಇಲ್ಲ. ಇದೆಂಥ ಪರಿಸ್ಥಿತಿ ನೋಡಿ.
ಇತ್ತೀಚಿಗೆ ನಾವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಮೊಗ್ರ ಎಂಬಲ್ಲಿ ದೈವದ ನೇಮೋತ್ಸವದ ನೇರ ಪ್ರಸಾರ ಮಾಡುವುದಾಗಿ ಒಪ್ಪಿಕೊಂಡಿದ್ವಿ. ಅಲ್ಲಿ ಹೋಗಿ ನೋಡಿದರೆ ನೆಟ್ ವರ್ಕ್ ಇಲ್ಲ. ನಮ್ಮ ತಂಡದವರು ಬೆಳಗ್ಗಿನಿಂದ ಸಂಜೆ ತನಕ ನೆಟ್ ವರ್ಕ್ ಹುಡುಕುವುದಕ್ಕಾಗಿ ಸುತ್ತಮುತ್ತಲಿನ ದೊಡ್ಡ ಮರಗಳನ್ನೆಲ್ಲ ಏರಿ ಬೆವರು ಸುರಿಸಿ ಪರೀಕ್ಷಿಸಿದ್ದು ಆಯಿತು. ದೊಡ್ಡ ಮರಗಳನ್ನೇರಿ ನಮ್ಮವರು ಸುಸ್ತಾಗಿದ್ದು ಬಿಟ್ಟರೆ ಏನೂ ಪ್ರಯೋಜನ ಆಗಲಿಲ್ಲ. ಏನೇ ಮಾಡಿದರೂ ನೆಟ್ ವರ್ಕ್ ಇಲ್ಲ.
ಈ ಸಂದರ್ಭದಲ್ಲಿ ನಮ್ಮ ಬಳಿ ಬಂದ ಹಿರಿಯ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿಯವರು ಏನಾಯಿತು ಎಂದು ಕೇಳಿದರು..? ನೆಟ್ ವರ್ಕ್ ಇಲ್ಲ ಲೈವ್ ಮಾಡುವುದಕ್ಕೆ ಕಷ್ಟ ಇದೆ ಎಂದು ಉತ್ತರ ನೀಡಿದೆ. ಮೊಗ್ರದಂತಹ ಜಾಗದಲ್ಲಿ ನಿಮಗೆ ನೆಟ್ ವರ್ಕ್ ಸಿಗೋದು ಕಷ್ಟ. ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಈ ಊರಿಗೆ ಸರಿಯಾದ ನೆಟ್ ವರ್ಕ್ ಬರಲೇ ಇಲ್ಲ. ಬಿಎಸ್ ಎನ್ ಎಲ್ ಇದೆ. ಅದು ಕೂಡ ಧೈರ್ಯದ ಬದುಕಲ್ಲ. ಯಾವಾಗ ಬೇಕಾದರೂ ಆಫ್ ಆಗಬಹುದು. ನಿಮಗೆ ಜಿಯೋ, ಏರ್ ಟೆಲ್ ಸಿಗಲಿಕ್ಕಿಲ್ಲ. ನೀವು ಒಪ್ಪುವುದಾದರೆ ನಮ್ಮ ಮನೆಯಲ್ಲಿರುವ ಏರ್ ಫೈಬರ್ ಅನ್ನು ನಿಮಗೆ ತಂದು ಕೊಡುತ್ತೇನೆ. ಇಲ್ಲಿನ ಯಾವುದಾದರೂ ಒಂದು ಮರಕ್ಕೆ ಕಟ್ಟಿದರೆ ನೆಟ್ ವರ್ಕ್ ಸಿಗಬಹುದು ಎಂದು ಸಲಹೆ ನೀಡಿದರು. ತಡಮಾಡದೆ ಆಯಿತು ಎಂದೆ. ಇಡೀ ದಿನ ನೆಟ್ ವರ್ಕ್ ಸಿಗದೆ ಪರದಾಡಿದ್ದ ನಮ್ಮವರಿಗೆ ಮರಳುಗಾಡಿನಲ್ಲಿ ಓಯಾಸಿಸ್ ಸಿಕ್ಕಿದಂತಾಯಿತು. ರಾತ್ರಿ ಹೊತ್ತಿಗೆ ನಮ್ಮವರು ದೊಡ್ಡ ಮರಕ್ಕೆ ಏರಿ ಡಿವೈಸ್ ಕಟ್ಟಿದರು. ಕೊನೆಗೂ ಮಿಕ್ಸಿಂಗ್ ಮಾಡುವವರ ಕಡೆಯಿಂದ ನೆಟ್ ವರ್ಕ್ ಬರ್ತಿದೆ ಅನ್ನೋ ಉತ್ತರ ಬಂದಾಗ ಎಲ್ಲರ ಮುಖದಲ್ಲಿ ಸಾರ್ಥಕ ಭಾವನೆ ಮೂಡಿತು.
ಹಳ್ಳಿ ಜನರಿಗೆ ಬೆಟ್ಟ ಗುಡ್ಡಗಳ ಅಡಚಣೆ ನಡುವೆ ಸಲೀಸಾಗಿ ನೆಟ್ ವರ್ಕ್ ಸಿಗುವುದು ಕಷ್ಟ. ಕೆಲವು ಸಲ ಗುಡ್ಡವನ್ನು ಏರಿ ನೆಟ್ ವರ್ಕ್ ಗಾಗಿ ಜನ ಪರದಾಡುತ್ತಿದ್ದಾರೆ. ಮಳೆಗಾಲದಲ್ಲಂತೂ ಪರಿಸ್ಥಿತಿ ದೇವರಿಗೂ ಬೇಡ. ಮರ ಬೀಳುವುದು ಕೇಬಲ್ ವೈರ್ ಕಟ್ಟಾಗುವುದು ನಡೆಯುತ್ತಲೇ ಇರುತ್ತದೆ. ಅಂತಹ ಊರನ್ನು ಗುರುತಿಸಿ ಸರ್ಕಾರ ಕೇಬಲ್ ರಹಿತ ಏರ್ ಫೈಬರ್ ಅಳವಡಿಸಿದರೆ ಜನರಿಗೆ ತುಂಬಾ ಅನುಕೂಲ ಆಗುತ್ತದೆ. ಒಂದು ಆಂಟೇನಾದ ಮೂಲಕ ಟವರ್ ನಿಂದ ನೇರವಾಗಿ ಎಳೆಯುವ ಸಿಗ್ನಲ್ಸ್ ಸಲೀಸಾಗಿ ನೆಟ್ ವರ್ಕ್ ಸಿಗುವಂತೆ ಮಾಡುತ್ತದೆ. ಈ ಸೌಲಭ್ಯ ನಮಗೆ ಮಹೇಶ್ ಅವರಿಂದ ಸಿಕ್ಕಿದ ನಂತರ ನಾವು ಸುಲಭವಾಗಿ ಲೈವ್ ಮಾಡುವಂತಾಯಿತು. ಈ ಒಂದು ನೆಟ್ ವರ್ಕ್ ಅನ್ನು ಇತ್ತೀಚಿಗೆ ಜಿಯೋದವರು ಕೂಡ ಬಿಟ್ಟಿದ್ದಾರೆ. ಆದರೆ ಎಲ್ಲರಿಗಿಂತ ಮೊದಲು ಜನರಿಗೆ ಪರಿಚಯಿಸಿದ್ದು ಬಿಎಸ್ ಎನ್ ಎಲ್ ನವರು. ಆದರೆ ಜ್ಞಾನ ಹಾಗೂ ಪ್ರಚಾರದ ಕೊರತೆಯಿಂದ ಈ ಯೋಜನೆ ಅಷ್ಟೊಂದು ಯಶಸ್ವಿಯಾಗಲಿಲ್ಲ.
ಅತ್ಯಂತ ಅಗ್ಗದ ದರದಲ್ಲಿ ಈ ಒಂದು ವ್ಯವಸ್ಥೆಯನ್ನು ಜನರು ತಮ್ಮ ಮನೆಗೆ ಅಳವಡಿಸಿಕೊಳ್ಳಬಹುದಾಗಿದೆ ಎಂದು ಮಹೇಶ್ ಪುಚ್ಚಪ್ಪಾಡಿಯವರು ಅಭಿಪ್ರಾಯಪಟ್ಟರು. ಇದರ ಲಾಭವನ್ನು ಪ್ರತಿಯೊಬ್ಬರು ಕೂಡ ಪಡೆದುಕೊಳ್ಳಬೇಕಿದೆ ಎಂದು ಸಲಹೆ ಕೂಡ ನೀಡಿದ್ದಾರೆ. ಸಕಾಲದಲ್ಲಿ ನಮ್ಮ ನ್ಯೂಸ್ ನಾಟೌಟ್ ಚಾನೆಲ್ ನಲ್ಲಿ ಲೈವ್ ಹೋಗುವುದಕ್ಕೆ ಅಲ್ಲಿನ ಸ್ಥಳ ಸಾನಿಧ್ಯಯಗಳಾದ ಶ್ರೀ ಕನ್ನಡದೇವತೆಯಾನೆ ಪುರುಷ ದೈವಸ್ಥಾನ ಮೊಗ್ರದ ದೈವಗಳ ಆಶೀರ್ವಾದವೂ ಪ್ರಮುಖ ಕಾರಣ. ಗ್ರಾಮೀಣ ಭಾಗದಲ್ಲಿ ನೆಟ್ ವರ್ಕ್ ವ್ಯವಸ್ಥೆ ಎಲ್ಲೆಲ್ಲಿ ಸರಿ ಇಲ್ಲವೋ ಅಲ್ಲಲ್ಲಿ ಏರ್ ಫೈಬರ್ ಬಳಕೆ ಹೆಚ್ಚಾಗಲಿ. ಪ್ರತಿ ಟವರ್ ಗೂ ಅದನ್ನು ಅಳವಡಿಸುವ ಕಾರ್ಯವಾಗಲಿ. ಜನರ ನೆಟ್ ವರ್ಕ್ ಸಮಸ್ಯೆ ಕೊನೆಗೊಳ್ಳಲಿ ಅನ್ನೋದು ನಮ್ಮ ಆಶಯ.