ಶ್ರೀ ರಂಗನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದೇಕೆ ಪ್ರಧಾನಿ..? ತಮಿಳುನಾಡಿನ ಈ ಪುರಾತನ ದೇಗುಲಕ್ಕೂ ಅಯೋಧ್ಯ ರಾಮನಿಗೂ ಸಂಬಂಧವೇನು..?

ನ್ಯೂಸ್ ನಾಟೌಟ್ : ಪ್ರಧಾನಿ ನರೇಂದ್ರ ಮೋದಿ(Narendra Modi) ಶನಿವಾರ(ಜ.20) ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀರಂಗಂನಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು, ಅಯೋಧ್ಯ ರಾಮಮಂದಿರಕ್ಕೂ ಈ ದೇಗುಲಕ್ಕೂ ವಿಶೇಷ ನಂಟಿದೆ ಎನ್ನಲಾಗಿದೆ. ಶ್ರೀರಂಗದಲ್ಲಿ ಪೂಜಿಸಲ್ಪಡುವ ದೇವರು ವಿಷ್ಣುವಿನ ರೂಪವಾದ ಶ್ರೀ ರಂಗನಾಥ ಸ್ವಾಮಿ. ಶ್ರೀರಂಗಂನಲ್ಲಿರುವ ವಿಗ್ರಹವನ್ನು ಮೂಲತಃ ಭಗವಾನ್ ರಾಮ ಮತ್ತು ಅವನ ಪೂರ್ವಜರು ಪೂಜಿಸುತ್ತಿದ್ದರು ಎಂದು ನಂಬಲಾಗಿದೆ. ಇದನ್ನು ಬ್ರಹ್ಮನು ರಾಮನ ಪೂರ್ವಜರಿಗೆ ಕೊಟ್ಟನು ಎಂಬ ನಂಬಿಕೆ ಇದೆ. ದ್ವೀಪವೊಂದರಲ್ಲಿ ನೆಲೆಸಿರುವ, ಕಾವೇರಿ ಮತ್ತು ಕೊಳ್ಳಿಡಂ ನದಿಗಳ ಸಂಗಮದಲ್ಲಿರುವ ಶ್ರೀರಂಗಂ ದೇವಾಲಯವು ತಮಿಳುನಾಡಿನ ಪುರಾತನ ವೈಷ್ಣವ ದೇವಾಲಯವಾಗಿದೆ. ಈ ದೇವಾಲಯವನ್ನು ‘ಬೂಲೋಗ ವೈಕುಂಠಂ’ ಅಥವಾ ‘ಭೂಮಿಯ ಮೇಲಿನ ವೈಕುಂಠಂ’ ಎಂದೂ ಕರೆಯಲಾಗುತ್ತದೆ. ತಮಿಳುನಾಡಿನ ಈ ಪುರಾತನ ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಧೋತಿ ಮತ್ತು ಶಾಲು ಧರಿಸಿದ್ದರು. ಅಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ದೇವಸ್ಥಾನದ ಆನೆಗೆ ಆಹಾರ ನೀಡಿ ಆಶೀರ್ವಾದ ಪಡೆದರು. ಶನಿವಾರ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಅಲ್ಲಿನ ಅರ್ಚಕರು ಅಯೋಧ್ಯೆಯ ರಾಮಮಂದಿರಕ್ಕೆ ಕೊಂಡೊಯ್ಯಲು ಉಡುಗೊರೆಯೊಂದನ್ನು ನೀಡಿದ್ದಾರೆ. ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಪುರಾತನ ದೇವಾಲಯದಲ್ಲಿ ಪ್ರಧಾನ ಅರ್ಚಕರ ಪರವಾಗಿ, ಅಯೋಧ್ಯೆಯ ರಾಮಮಂದಿರಕ್ಕೆ ಕೊಂಡೊಯ್ಯಲು ಬುಟ್ಟಿಯಲ್ಲಿ ಪ್ರಧಾನಿಗೆ ಉಡುಗೊರೆಯನ್ನು ನೀಡಲಾಯಿತು ಎಂದು ವರದಿ ತಿಳಿಸಿದೆ.