ನ್ಯೂಸ್ ನಾಟೌಟ್: ಸುಳ್ಯದಲ್ಲಿ ಅಳವಡಿಸಿದ್ದ ರಾಮಮಂದಿರದ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸಿ ಗಡಿಪಾರು ಶಿಕ್ಷೆಯನ್ನು ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಅವರಿಗೆ ಕರೆ ಮಾಡಿರುವ ನಳಿನ್ ಕುಮಾರ್ ಕಟೀಲ್ ಆರೋಪಿಗಳನ್ನು ಕೇವಲ ಬಂಧಿಸಿದರೆ ಸಾಲದು ಅಂತಹ ವಿಕೃತ ಮನಸ್ಸಿನವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬದ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ಬ್ಯಾನರ್ ಅಳವಡಿಕೆ ಮಾಡಿ ಶುಭಾಶಯ ಕೋರಲಾಗಿತ್ತು. ಆದರೆ ಯಾರೋ ಕಿಡಿಗೇಡಿಗಳು ಅದನ್ನು ಹರಿದು ಹಾಕಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿ ಸುಳ್ಯದಲ್ಲಿ ಒಂದು ರೀತಿಯ ಅಶಾಂತಿಯ ವಾತಾವರಣಕ್ಕೆ ಕಾರಣವಾಗಿತ್ತು. ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಮಾಹಿತಿ ಈಗಾಗಲೇ ಸಿಸಿ ಕ್ಯಾಮೆರಾ ಪರೀಕ್ಷೆ ನಡೆಸುವಾಗ ಸಿಕ್ಕಿದೆ. ಅದರಲ್ಲಿ ಓರ್ವ ಮಾನಸಿಕ ಅಸ್ವಸ್ಥನಂತೆ ಇರುವ ವ್ಯಕ್ತಿ ಈ ಕೃತ್ಯ ನಡೆಸಿದ್ದಾನೆ ಅನ್ನುವ ವಿಚಾರ ತಿಳಿದು ಬಂದಿದೆ. ಈ ಬಗ್ಗೆ ಮುಂದಿನ ದಿನದಲ್ಲಿ ಸ್ಪಷ್ಟ ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ.