ನ್ಯೂಸ್ ನಾಟೌಟ್: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿ ಬುಶ್ರಾ ಬೀಬಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ದೇಶದ ಸೂಕ್ಷ್ಮ ಮಾಹಿತಿಗಳ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಇಮ್ರಾನ್ ಮತ್ತು ಇತರರಿಗೆ 10 ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಇದರ ಬೆನ್ನಲ್ಲೇ ಇಂದು ಮತ್ತೊಂದು ಪ್ರಕರಣದಲ್ಲಿ ಶಿಕ್ಷೆಯಾಗಿರುವುದರಿಂದ ಫೆಬ್ರುವರಿ 8ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಮರಳುವ ನಿರೀಕ್ಷೆಯಲ್ಲಿದ್ದ ಇಮ್ರಾನ್ ಖಾನ್ ಗೆ ಭಾರಿ ಹಿನ್ನಡೆಯಾಗಿದೆ ಎಂದು ವರದಿ ತಿಳಿಸಿದೆ.
ಅಕ್ಕೊ–ಯು–ಎಂಟಬಿಲಿಟಿ ನ್ಯಾಯಾಲಯದ ನ್ಯಾಯಾಧೀಶರಾದ ಮೊಹಮ್ಮದ್ ಬಶೀರ್ , ಇಮ್ರಾನ್ ಖಾನ್ ನ್ನು ಇರಿಸಲಾಗಿರುವ ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲೇ ಪ್ರಕರಣದ ವಿಚಾರಣೆ ನಡೆಸಿದರು.
ಇಬ್ಬರಿಗೂ 10 ವರ್ಷಗಳ ಕಾಲ ಯಾವುದೇ ಸರ್ಕಾರಿ ಹುದ್ದೆ ಹೊಂದದಂತೆ ನಿರ್ಬಂಧ ಹೇರಲಾಗಿದ್ದು, ತಲಾ ₹787 ಮಿಲಿಯನ್ ದಂಡ ವಿಧಿಸಲಾಗಿದೆ.
ಪ್ರಕರಣದ ತೀರ್ಪಿನ ಸಂದರ್ಭ ಇಮ್ರಾನ್ ಪತ್ನಿ ಬುಶ್ರಾ ನ್ಯಾಯಾಲಯದಲ್ಲಿ ಹಾಜರಿರಲಿಲ್ಲ ಎನ್ನಲಾಗಿದೆ.