ನ್ಯೂಸ್ ನಾಟೌಟ್ : ಕೈಯಲ್ಲಿ ಗಧೆ , ಮುಖದಲ್ಲಿ ಹನುಮಂತನ ಮುಖವಾಡ..!ಸುತ್ತಮುತ್ತಲೂ ನೆರೆದಿರುವ ಕಲಾವಿದರು..! ಹೌದು, ಈ ದೃಶ್ಯದಲ್ಲಿರುವ ಆ ವ್ಯಕ್ತಿಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು. ಸದ್ಯ ಈ ಫೋಟೋ ಎಲ್ಲಡೆ ವೈರಲ್ ಆಗಿದೆ.ಹೌದು,ಭಾರತ್ ಜೋಡೊ ನ್ಯಾಯ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಜರಂಗ್ ಬಲಿಯ ಮುಖವಾಡ ಧರಿಸಿ ಇದೀಗ ಭಾರಿ ಗಮನ ಸೆಳೆದಿದ್ದಾರೆ.
ಮಜುಲಿಯ ಶ್ರೀ ಔನಿಯಾತಿ ಸತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಈ ಗೆಟಪ್ನಲ್ಲಿ ಪೋಸ್ ನೀಡಿದ್ದಾರೆ.ಜನರ ಕೋರಿಕೆಯ ಮೇರೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರು ಪಾಲ್ಗೊಂಡರು.ಬಳಿಕ ‘ಬಜರಂಗ ಬಲಿ’ಯ ಮುಖವಾಡ ಧರಿಸಿ ಕೈಯಲ್ಲಿ ಗದೆ ಹಿಡಿದು ಸಂಭ್ರಮಿಸಿದರು.ಈ ಚಿತ್ರಗಳನ್ನು ಅಸ್ಸಾಂ ಕಾಂಗ್ರೆಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.ಇದಕ್ಕೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
ಮಾತ್ರವಲ್ಲ,ಪೋಸ್ಟ್ ನಲ್ಲಿ “ಜೈ ಬಜರಂಗಬಲಿ! ಅವರ ಆಶೀರ್ವಾದ ನಮ್ಮ ಪ್ರೀತಿಯ ಮಾತೃಭೂಮಿಯ ಮೇಲೆ ಸದಾ ಇರಲಿ. ರಾಹುಲ್ ಗಾಂಧಿ ಜೀ ಅವರು ಮುಖವಾಡ ತಯಾರಿಕೆಯ ಸಾಂಪ್ರದಾಯಿಕ ಕಲೆಯನ್ನು ಉತ್ತೇಜಿಸುತ್ತಿದ್ದಾರೆ, ಮಜುಲಿಯ ನವ-ವೈಷ್ಣವ ಸಂಸ್ಕೃತಿಯನ್ನು ಆಚರಿಸುತ್ತಾರೆ, ಏಕತೆಯಲ್ಲಿ ವೈವಿಧ್ಯತೆಯನ್ನು ಸಂಭ್ರಮಿಸುತ್ತಿದ್ದಾರೆ” ಎಂದು ಬರೆಯಲಾಗಿದೆ.
ಔನಿಯಾತಿ ಸತ್ರಕ್ಕೆ ಭೇಟಿ ನೀಡಲು ರಾಹುಲ್ ಗಾಂಧಿ ಅವರು ಬೋಟ್ ರೈಡ್ ಮಾಡಿದರು.ಈ ವೇಳೆ ಎಕ್ಸ್ನಲ್ಲಿ ಬರೆದು ಕೊಂಡಿರುವ ಅವರು “ ಶ್ರೀ ಶ್ರೀ ಔನಿಯಾತಿ ಸತ್ರಕ್ಕೆ ಭೇಟಿ ನೀಡಲು ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ದೋಣಿ ವಿಹಾರ ಮಾಡಿದೆ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ, ಅಸ್ಸಾಂನ ಶಂಕರ್ ದೇವ್ ಜಿಯವರ ನಾಡು, ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಜೀವನ ತತ್ವವನ್ನು ನಮಗೆ ಕಲಿಸುತ್ತದೆ. ಅಂತಹ ಶ್ರೇಷ್ಠ ಸಂಸ್ಕೃತಿಯನ್ನು ಹತ್ತಿರದಿಂದ ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಅವಕಾಶ ಸಿಕ್ಕಿದ್ದು ತೃಪ್ತಿ ತಂದಿದೆ” ಎಂದಿದ್ದಾರೆ.