ನ್ಯೂಸ್ ನಾಟೌಟ್ : ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆಗೆ ಇನ್ನು ಕೇವಲ ೩ ದಿನವಷ್ಟೇ ಬಾಕಿ ಉಳಿದಿವೆ.ದೇಶ-ವಿದೇಶಗಳ ಕೋಟ್ಯಂತರ ರಾಮ ಭಕ್ತರು ಈ ಸುಂದರ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಇಡೀ ದೇಶವೇ ಸಂಭ್ರಮ ಪಡುತ್ತಿದ್ದು,ಅಯೋಧ್ಯೆಯಲ್ಲಂತೂ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ.ಸಾವಿರಾರು ಗಣ್ಯರು ಶ್ರೀರಾಮನ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾಗುವ ಕಾರಣ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದೀಗ ಈ ಸುಂದರ ಕ್ಷಣವನ್ನು ವೀಕ್ಷಿಸಲೆಂದೇ ಅನೇಕ ಕಡೆಗಳಲ್ಲಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.ಶಾಲೆಗಳಲ್ಲಿಯೂ ಪರದೆ ಮೂಲಕ ಈ ಸಂಭ್ರಮವನ್ನು ಮಕ್ಕಳು ನೋಡಬೇಕೆಂಬ ಉದ್ದೇಶದಿಂದ ವಿಶೇಷ ವ್ಯವಸ್ಥೆಗೂ ಚಿಂತನೆ ನಡೆಸುತ್ತಿರುವಾಗಲೇ ಇದೀಗ ರಾಮಮಂದಿರ ಉದ್ಘಾಟನೆಯಾಗುವ ಜನವರಿ 22ರಂದು ‘ರಾಷ್ಟ್ರೀಯ ರಜಾ ದಿನ’ (National Holiday) ಎಂಬುದಾಗಿ ಘೋಷಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ (Droupadi Murmu) ಮುರ್ಮು ಅವರಿಗೆ ಪತ್ರ ಬರೆಯಲಾಗಿದೆ.
ಹೌದು,ಘನಶ್ಯಾಮ ಉಪಾಧ್ಯಾಯ ಎಂಬ ವಕೀಲರೊಬ್ಬರು ಜನವರಿ 22ಅನ್ನು ರಾಷ್ಟ್ರೀಯ ರಜಾ ದಿನ ಎಂಬುದಾಗಿ ಘೋಷಿಸಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. “ಭಗವಾನ್ ಶ್ರೀರಾಮನು ಕೋಟ್ಯಂತರ ಜನರ ಆರಾಧ್ಯ ದೇವರು. ಆತ ಭಾರತೀಯರ ಹೆಮ್ಮೆ ಹಾಗೂ ಆದರ್ಶ ಪುರುಷನಾಗಿದ್ದಾನೆ. ಎಲ್ಲ ಹಿಂದೂಗಳ ಉಸಿರಿನಲ್ಲಿ ರಾಮ ಬೆರೆತಿದ್ದಾನೆ. ಹಾಗಾಗಿ, ಜನವರಿ 22ಅನ್ನು ರಾಷ್ಟ್ರೀಯ ರಜಾ ದಿನ ಎಂಬುದಾಗಿ ಘೋಷಿಸಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಮಮಂದಿರದಲ್ಲಿ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸುವ ದಿನವಾದ ಜನವರಿ 22ರಂದು ದೇಶದ ಎಲ್ಲ ಕೋರ್ಟ್ ಕಲಾಪಗಳಿಗೆ ರಜೆ ಘೋಷಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಿಗೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕೂಡ ಮನವಿ ಮಾಡಿದೆ.