ನ್ಯೂಸ್ ನಾಟೌಟ್ :2 ವರ್ಷದ ಅಮಾಯಕ ಮಗು ಸೇರಿ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ನೌಗಾಚಿಯಾ ಜಿಲ್ಲೆಯ ಗೋಪಾಲ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ. ಬಿಹಾರದಲ್ಲಿ ನಡೆದ ಮರ್ಯಾದಾ ಹತ್ಯೆ ಇದೀಗ ಇಡೀ ದೇಶದಾದ್ಯಂತ ಸುದ್ದಿಯಾಗಿದೆ.
ಚಂದನ್ (40), ಚಾಂದಿನಿ (23) ರೋಶ್ನಿ (2) ಮೃತ ದುರ್ದೈವಿಗಳು. ಚಂದನ್ ಮತ್ತು ಚಾಂದಿನಿ ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಮೂರು ವರ್ಷಗಳ ಹಿಂದೆ ಪ್ರೇಮ ವಿವಾಹ ಆಗಿದ್ದರು. ಇದಕ್ಕೆ ಚಾಂದಿನಿ ಮನೆಯವರಿಂದ ತೀವ್ರ ವಿರೋಧ ಇತ್ತು. ಮದುವೆ ಆಗಿದ್ದ ಕಾರಣಕ್ಕೆ ಕೊಲೆ ಮಾಡಿ ಸೇಡು ತೀರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಚಾಂದಿನಿ ತಂದೆ ಮತ್ತು ಸಹೋದರನ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮೃತ ಚಂದನ್ ಸಹೋದರ ಮಾಡಿರುವ ಆರೋಪದ ಪ್ರಕಾರ, ಚಾಂದಿನಿಯ ತಂದೆ ಪಪ್ಪು ಸಿಂಗ್ ಮೊದಲು ಇಬ್ಬರಿಗೂ ರಾಡ್ನಿಂದ ಹೊಡೆದಿದ್ದಾನೆ. ಕೊನೆಗೆ ಪಪ್ಪು ಸಿಂಗ್ ಮಗ ಧೀರಜ್ ಎಂಟ್ರಿಯಾಗಿ ಗುಂಡು ಹಾರಿಸಿದ್ದಾನೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾನೆ.
ಚಂದನ್ಗೆ ಗೋಪಾಲ್ಪುರದಲ್ಲಿ ಎರಡು ಮನೆಗಳಿದ್ದು, ರಸ್ತೆ ಬದಿಯಲ್ಲಿರುವ ಮನೆಯಲ್ಲಿ ಆತನ ಹೆತ್ತವರು ವಾಸಿಸುತ್ತಿದ್ದಾರೆ. ಹಳ್ಳಿಯಲ್ಲಿರುವ ಮನೆಯಲ್ಲಿ ಚಂದನ್ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಹೆತ್ತವರ ಆರೋಗ್ಯ ವಿಚಾರಿಸಲು ಚಂದನ್, ಹೆಂಡತಿ ಮತ್ತು ಮಗು ಜೊತೆ ಬರುತ್ತಿದ್ದಾಗ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ಗುಂಡು ಹಾರಿಸಿ ಕೊಲೆ ಮಾಡಿದ ಬಳಿಕ ಇಬ್ಬರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.ಈಗಾಗ್ಲೇ ತಂಡ ರಚಿಸಲಾಗಿದೆ. ಪ್ರೇಮ ಪ್ರಕರಣದಲ್ಲಿ ಮೂವರ ಕೊಲೆಯಾಗಿದೆ. ಇಬ್ಬರು ಮೂರು ವರ್ಷದ ಹಿಂದೆ ಮದುವೆ ಆಗಿದ್ದರು. ಇದರಿಂದ ಮಹಿಳೆಯ ಕುಟುಂಬಸ್ಥರು ಮುನಿಸಿಕೊಂಡಿದ್ದರು. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಾಗ್ಚಿಯಾ ಉಪವಿಭಾಗೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.