ನ್ಯೂಸ್ ನಾಟೌಟ್ : ಕೆಲವೊಮ್ಮೆ ಸೆಲೆಬ್ರೆಟಿಗಳು ಬಂದು ಹೋದ ಜಾಗ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಳ್ಳುವುದಿದೆ.ಇನ್ನೂ ಕೆಲವೊಮ್ಮೆ ಅವರು ಬಳಕೆ ಮಾಡೋ ವಸ್ತುಗಳನ್ನು ಜನ ಗಮನಿಸುತ್ತಲೇ ಇರುತ್ತಾರೆ.ಹೌದು,ಇದೀಗ ಮೊನ್ನೆಯಷ್ಟೇ ಮಕರ ಸಂಕ್ರಾಂತಿಯಂದು ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಚಿಕ್ಕ ಹಸುಗಳಿಗೆ ಮೇವು ತಿನ್ನಿಸುತ್ತಿದ್ದ ದೃಶ್ಯ ಕಂಡುಬಂತು. ಈ ಫೋಟೋಗಳನ್ನು ನೋಡಿದ ಹಲವರು ಇದು ಹಸು ಅಲ್ಲ ಕರು ಎಂದು ಭಾವಿಸಿದ್ದರು. ಆದರೆ ಮೋದಿ ಮೇವು ತಿನ್ನಿಸಿದ ಹಸುಗಳನ್ನು ಈಗ ಜನ ಹುಡುಕಾಡಲು ಶುರು ಮಾಡಿದ್ದಾರೆ.
ಪ್ರಧಾನಿ ಮೋದಿಯವರು ಚಿಕ್ಕ ಹಸುಗಳಿಗೆ ಮೇವು ತಿನ್ನಿಸುತ್ತಿದ್ದ ಆ ಹಸುಗಳನ್ನು ಪುಂಗನೂರು ತಳಿಯ ಈ ಹಸುಗಳು ಎಂದು ಹೇಳಲಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಇದು ಕಂಡುಬರುತ್ತವೆ. ಒಂದು ಕಾಲದಲ್ಲಿ ಸುಮಾರು 13 ಸಾವಿರದಷ್ಟಿದ್ದ ಈ ಹಸುಗಳ ಸಂಖ್ಯೆ ಇದೀಗ 200ಕ್ಕೆ ಇಳಿದಿದೆ ಅನ್ನೋದು ಭಾರಿ ಬೇಸರದ ಸಂಗತಿ. ಈಗ ಮೋದಿ ಅದರ ಫೋಟೋಗಳನ್ನು ಪೋಸ್ಟ್ ಮಾಡಿದಾಗ, ಜನರು ಈ ಹಸುವಿನ ಬಗ್ಗೆ ಹೆಚ್ಚಿನ ಉತ್ಸಾಹವನ್ನು ತೋರಿಸುತ್ತಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಕಂಡುಬರುವ ಈ ದೇಸಿ ಹಸುಗಳು ತಮ್ಮ ಸಣ್ಣ ಎತ್ತರಕ್ಕೆ ಪ್ರಸಿದ್ಧವಾಗಿವೆ. ಚಿತ್ತೂರಿನ ಪುಂಗನೂರು ಗ್ರಾಮದಲ್ಲಿ ಈ ಹಸುಗಳು ಕಂಡುಬರುವುದರಿಂದ ಪುಂಗನೂರು ಎಂದು ಹೆಸರಿಸಲಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಗ್ರಾಮದ ಜಮೀನ್ದಾರರು ಪುಂಗನೂರು ತಳಿಯನ್ನು ಸಾಕಿ ಅದರಿಂದ ಸಿಗುವ ಪೌಷ್ಟಿಕ ಹಾಲನ್ನು ಸೇವಿಸುತ್ತಿದ್ದರು.
ಪುಂಗನೂರು ಹಸುವಿನ ಮೂತ್ರ ಮತ್ತು ಸಗಣಿ ಕೂಡ ಔಷಧೀಯ ಗುಣವನ್ನು ಹೊಂದಿದೆ.ಅದಕ್ಕಾಗಿಯೇ ಅವುಗಳನ್ನು ನೈಸರ್ಗಿಕ ಔಷಧಿಗಳು ಮತ್ತು ಸಾವಯವ ಗೊಬ್ಬರಗಳಾಗಿ ಬಳಸಲಾಗುತ್ತದೆ. ಇದೇ ಕಾರಣಕ್ಕೆ ಸ್ಥಳೀಯರು ಈ ಹಸುವನ್ನು ಚಿನ್ನದ ಗಣಿ ಎಂದೂ ಕರೆಯುತ್ತಾರೆ. ಪುಂಗನೂರು ಹಸುಗಳು ಮೇವನ್ನು ಕಡಿಮೆ ತಿನ್ನುತ್ತವೆ. ದಿನಕ್ಕೆ ಗರಿಷ್ಠ ಒಂದೂವರೆ ಲೀಟರ್ ಹಾಲು ನೀಡಬಹುದು.
ಕಡಿಮೆ ಪ್ರಮಾಣದ ಹಾಲಿನ ಕಾರಣ,ರೈತರು ಪುಂಗನೂರು ಹಸುಗಳನ್ನು ಸಾಕುವುದನ್ನೇ ನಿಲ್ಲಿಸಿದ್ದರು.ಪರಿಣಾಮವಾಗಿ ಅವುಗಳ ಸಂಖ್ಯೆಯು ಇದ್ದಕ್ಕಿದ್ದಂತೆ ಕುಸಿಯಲು ಪ್ರಾರಂಭಿಸಿತು.ಆದರೂ 2014 ರಲ್ಲಿ, ಮೋದಿ ಅವರು ದೇಶೀಯ ತಳಿಯ ಗೋವುಗಳ ಸಂರಕ್ಷಣೆಗಾಗಿ ಮಿಷನ್ ಗೋಕುಲ್ ಅನ್ನು ಪ್ರಾರಂಭಿಸಿದರು.ಆಂಧ್ರಪ್ರದೇಶ ಸರ್ಕಾರವು ಈ ಕಾರ್ಯಕ್ರಮದಿಂದ ಪಡೆದ ಹಣವನ್ನು ಮತ್ತು ರಾಜ್ಯದ ಖಜಾನೆಯನ್ನು ಒಟ್ಟುಗೂಡಿಸಿ ಮಿಷನ್ ಪುಂಗನೂರ್ ಅನ್ನು ಪ್ರಾರಂಭಿಸಿತು.ಶ್ರೀ ವೆಂಕಟೇಶ್ವರ ಪಶುವೈದ್ಯಕೀಯ ವಿಶ್ವವಿದ್ಯಾನಿಲಯವು ಪುಂಗನೂರು ಸಮೀಪದ ಪಲಮನೇರ್ನಲ್ಲಿ ಜಾನುವಾರು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದು, ಈ ವಿಶೇಷ ತಳಿಯ ಹಸುಗಳ ಕುರಿತು ನಿರಂತರ ಸಂಶೋಧನೆ ನಡೆಸಲಾಗುತ್ತಿದೆ. ಅಲ್ಲದೆ, ಅವುಗಳ ಸಂರಕ್ಷಣೆಗಾಗಿ ಮತ್ತು ಅವುಗಳ ಜನಸಂಖ್ಯೆಯನ್ನು ಹೆಚ್ಚಿಸಲು ಈ ಸಂಸ್ಥೆಯಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಪುಂಗನೂರು ಗೋವುಗಳಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವೂ ಇದೆ. ಈ ಹಸುಗಳಲ್ಲಿ ಮಹಾಲಕ್ಷ್ಮಿ ನೆಲೆಸಿದ್ದಾಳೆ ಎಂದು ಜನರು ನಂಬುತ್ತಾರೆ. ಅದಕ್ಕಾಗಿಯೇ ದಕ್ಷಿಣ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿನ ಶ್ರೀಮಂತ ಜನರು ಈ ಹಸುಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಪ್ರತಿದಿನ ಪೂಜಿಸುತ್ತಾರೆ. ಅಲ್ಲದೆ, ಅದರ ಹಾಲನ್ನು ಅತ್ಯಂತ ಪವಿತ್ರ ಮತ್ತು ಪೌಷ್ಟಿಕವೆಂದು ಪರಿಗಣಿಸಲಾಗಿದೆ, ಅದಕ್ಕಾಗಿಯೇ ವಿಶ್ವಪ್ರಸಿದ್ಧ ತಿರುಪತಿ ಬಾಲಾಜಿ ದೇವಾಲಯ ಸೇರಿದಂತೆ ದಕ್ಷಿಣದ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ಭೋಗ್ ಮತ್ತು ಕ್ಷೀರಾಭಿಷೇಕಕ್ಕೆ ಪುಂಗನೂರು ಹಸುವಿನ ಹಾಲನ್ನು ಮಾತ್ರ ಬಳಸಲಾಗುತ್ತದೆ. ಪುಂಗನೂರು ಹಸುವಿನ ವಿಡಿಯೋವನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದಾಗ, ಈ ತಳಿ ಮತ್ತೊಮ್ಮೆ ಜನಮನಕ್ಕೆ ಬಂದಿದೆ.