ನ್ಯೂಸ್ ನಾಟೌಟ್ : ಇಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಈ ಒಂದು ಸಂಭ್ರಮದ ಕ್ಷಣಕ್ಕಾಗಿ ಇಡೀ ದೇಶವೇ ಕಾಯುತ್ತಿದೆ.ಆದರೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಇಂದು (ಜನವರಿ 22) ನೂತನ ರಾಮಮಂದಿರದಲ್ಲಿ ನಡೆಯುವ ರಾಮಲಲ್ಲಾ ಪ್ರತಿಷ್ಠಾಪನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಲಾಗಿದೆ.
ಅಯೋಧ್ಯೆಯಲ್ಲಿ ಚಳಿ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಅವರು ತಮ್ಮ ಅಯೋಧ್ಯೆ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.ಅವರಿಗೀಗ 96 ವರ್ಷ ಆಗಿರೋದ್ರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಈ ಹಿಂದೆಯೇ ಆರೆಸ್ಸೆಸ್ ಅಧಿಕಾರಿಗಳಾದ ಕೃಷ್ಣ ಗೋಪಾಲ್, ರಾಮ್ ಲಾಲ್ ಮತ್ತು ಅಲೋಕ್ ಕುಮಾರ್ ಅವರು ಲಾಲ್ ಕೃಷ್ಣ ಅಡ್ವಾಣಿ ಅವರ ಮನೆಗೆ ಆಗಮಿಸಿ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಅಡ್ವಾಣಿ ಅವರು ಇಂತಹ ಭವ್ಯ ಸಮಾರಂಭದಲ್ಲಿ ನೇರವಾಗಿ ಉಪಸ್ಥಿತರಿರುವ ಅವಕಾಶ ಸಿಕ್ಕಿದ್ದು ಅದೃಷ್ಟದ ಸಂಗತಿ ಎಂದು ಹೇಳಿದ್ದರು.ಆದರೆ ಕಾರಾಣಾಂತರಗಳಿಂದ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಅವರಿಗೆ ಕಷ್ಟವಾಗುತ್ತಿದೆ. ದಿಲ್ಲಿ, ಉತ್ತರ ಪ್ರದೇಶದ ಭಾಗಗಳಲ್ಲಿ ವಿಪರೀತ ಚಳಿ ವಾತಾವರಣವಿರುವುದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಲಾಲ್ ಕೃಷ್ಣ ಅಡ್ವಾಣಿ ಅವರು ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಅಯೋಧ್ಯೆಯಲ್ಲಿ ಸಂಭ್ರಮ ಮನೆ ಮಾಡಿದ್ದು,ಹೂವುಗಳು ಮತ್ತು ಬೀದಿದೀಪಗಳು ಮತ್ತು ಭಗವಾನ್ ರಾಮನ ಪೋಸ್ಟರ್ಗಳಿಂದ ಅಲಂಕರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯಲ್ಲಿ ‘ಪ್ರಾಣ ಪ್ರತಿಷ್ಠಾ’ ವಿಧಿವಿಧಾನಗಳಿಗೆ ಚಾಲನೆ ನೀಡಲಿದ್ದಾರೆ. ಬಾಂಬ್ ನಿಗ್ರಹ ದಳ ಮತ್ತು ಸ್ನೈಪರ್ಗಳು ಸೇರಿದಂತೆ 13,000 ಪಡೆಗಳೊಂದಿಗೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಎನ್ಡಿಆರ್ಎಫ್ನ ತಂಡವೊಂದು ಅಯೋಧ್ಯೆಯ ರಾಮಮಂದಿರದ ಬಳಿ ಶಿಬಿರವನ್ನು ಸ್ಥಾಪಿಸಿದೆ.