- +91 73497 60202
- [email protected]
- November 22, 2024 8:11 PM
ಶೆಟ್ಟರ್ ಬಳಿಕ ಲಕ್ಷ್ಮಣ ಸವದಿ ಮತ್ತೆ ಬಿಜೆಪಿ ಸೇರ್ತಾರಾ..? ಶಾಸಕರನ್ನು ದಿಢೀರ್ ಭೇಟಿಯಾದ ಡಿಸಿಎಂ ಡಿಕೆಶಿ
ನ್ಯೂಸ್ ನಾಟೌಟ್ : ಕಾಂಗ್ರೆಸ್ ತೊರೆದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾದ ಬಳಿಕ ಹಲವು ರಾಜಕೀಯ ಸಂಚಲನಗಳು ನಡೆಯುತ್ತಿವೆ. ಅಥಣಿ ಶಾಸಕ ಲಕ್ಷ್ಮಣ ಸವದಿ ಅವರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತ್ಯೇಕ ಚರ್ಚೆ ನಡೆಸಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಶೆಟ್ಟರ್ ನಂತರ ಸವದಿ ಮುಂದಿನ ನಡೆಯ ಬಗ್ಗೆಯೂ ಚರ್ಚೆ ಆರಂಭವಾಗಿದ್ದ ಹಿನ್ನೆಲೆಯಲ್ಲಿ ಶಿವಕುಮಾರ್ ಲಕ್ಮಣ್ ಸವದಿ ಜತೆ ಮಾತುಕತೆ ನಡೆಸಿದರು ಎನ್ನಲಾಗಿದೆ. ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ಸವದಿ, ಈಗಾಗಲೇ ಕಾಂಗ್ರೆಸ್ ಪಕ್ಷ ಬಿಡಲ್ಲ ಎಂದು ಹೇಳಿದ್ದೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಶೆಟ್ಟರ್ ಬಗ್ಗೆ ಪ್ರತಿಕ್ರಿಯಿಸಿದ ಸವದಿ, ಶೆಟ್ಟರ್ ಯಾಕೆ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಶೆಟ್ಟರ್ ಬಿಜೆಪಿಗೆ ಹೋಗಿರುವುದರಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯಲ್ಲೂ ಹಾನಿ ಆಗುವುದಿಲ್ಲ. ರಾಷ್ಟ್ರೀಯ ಪಕ್ಷಗಳು ಎಂದಿಗೂ ಒಬ್ಬರ ಮೇಲೆ ಅವಲಂಬಿತವಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಶೆಟ್ಟರ್ ವಿಚಾರ ಬೇರೆ, ಬೇರೆಯವರ ವಿಚಾರವೇ ಬೇರೆ. ಇನ್ನು ಯಾರೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಕಾಂಗ್ರೆಸ್‌ನಿಂದ ಯಾರೂ ಬಿಜೆಪಿಗೆ ಹೋಗಲ್ಲ ಎಂದು ಸವದಿ ಭೇಟಿಯ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ವಿಧಾನಸಭೆ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಿದ್ದರು. ಹುಬ್ಬಳ್ಳಿ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್ ಸೋಲುಂಡರೆ, ಲಕ್ಷ್ಮಣ ಸವದಿ ಅಥಣಿ ಕ್ಷೇತ್ರದಲ್ಲಿ ಭಾರಿ ಅಂತರದಿಂದ ಜಯಗಳಿಸಿದ್ದರು.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ