ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಹೆಣ್ಣು ಸಿಗುತ್ತಿಲ್ಲವೆಂದು ಯುವಕರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇವೆ.ಇದೀಗ ಇಲ್ಲೊಬ್ಬ ಯುವಕ ಮದುವೆಯಾಗಲು ಯಾರೂ ಹೆಣ್ಣು ಕೊಡುತ್ತಿಲ್ಲ (No one giving bride) ಎಂಬ ಬೇಸರದಿಂದ ಆತ್ಮಹತ್ಯೆಗೆ ಶರಣಾದ ಘಟನೆ ಬಗ್ಗೆ ವರದಿಯಾಗಿದೆ.
ವಿಜಯನಗರ ಜಿಲ್ಲೆಯಲ್ಲಿ (Vijaya Nagara News) ಈ ಘಟನೆ ವರದಿಯಾಗಿದ್ದು,ಕಳೆದ ಜನವರಿ 5ರಂದೇ ಆತ ವಿಷ ಸೇವಿಸಿದ್ದ ಎನ್ನಲಾಗಿದೆ. ಜನವರಿ 15ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದ್ದಾನೆ. ಆತ ಮೃತಪಟ್ಟ ಬಳಿಕವಷ್ಟೇ ಆತನ ಸಾವಿನ ನಿಜ ಕಾರಣ ಬೆಳಕಿಗೆ ಬಂದಿದೆ.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ನಿವಾಸಿಯಾಗಿರುವ ಬಿ.ಮಧುಸೂಧನ (26) ಎಂಬಾತನೇ ವಿಷ ಸೇವಿಸಿ ಮೃತಪಟ್ಟ ಯುವಕ. ಮದುವೆ ವಯಸ್ಸಾಗಿದ್ದರೂ ನನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ಬೇಸರದಿಂದ ಇದ್ದ ಆತ ಕೊನೆಗೆ ಜೀವವನ್ನೇ ತೆಗೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದ.ಆತನಿಗೆ ಮದುವೆಗೆ ಹುಡುಗಿ ಸಿಗದೆ ಇರಲು ಅನ್ಯ ಕಾರಣಗಳು ಏನಿದ್ದವೋ ಗೊತ್ತಿಲ್ಲ.ಆದರೆ, ಪ್ರಮುಖವಾಗಿ ಆತನ ತಂದೆ ಮಾನಸಿಕ ಅಸ್ವಸ್ಥರಾಗಿದ್ದು ಒಂದು ಪ್ರಮುಖ ಕಾರಣವಾಗಿದೆ. ಮಾನಸಿಕ ಅಸ್ವಸ್ಥರಾಗಿರುವ ತನ್ನ ತಂದೆಯನ್ನು ನೋಡಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಆತ ಬೇಸರಿಸಿಕೊಂಡಿದ್ದ.
ಈತನನ್ನು ಮೇಲ್ನೋಟಕ್ಕೆ ನೋಡಿದ ಕೆಲವರು ಹುಡುಗಿ ಕೊಡಲು ಒಪ್ಪಿದ್ದರೂ ಬಳಿಕ ಮನೆಗೆ ಬಂದಾಗ ಅಲ್ಲಿ ತಂದೆಯ ಮಾನಸಿಕ ಅಸ್ವಸ್ಥತೆಯನ್ನು ಕಂಡು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಮಧುಸೂದನ ಗ್ರಾಮದ ಹೊರವಲಯದ ವೇಣಿ ಈರಪ್ಪನ ಮಠದ ಬಳಿ ಹೋಗಿ ವಿಷ ಸೇವಿಸಿದ್ದಾನೆ.ವಿಷಯ ತಿಳಿದ ತಕ್ಷಣ ಆತನನ್ನು ಗುಡೇಕೋಟೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ ಸಾವು ಸಂಭವಿಸಿದೆ. ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.