ದುಬೈ ವ್ಯಾಘ್ರನ ಜತೆ ಕರ್ನಾಟಕದ ಕಾಟೇರ, ವೈರಲ್ ವಿಡಿಯೋ ಇಲ್ಲಿದೆ

ನ್ಯೂಸ್ ನಾಟೌಟ್: ಕಾಟೇರ ಸಿನಿಮಾದ ಪ್ರಮೋಷನ್‌ಗಾಗಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ದುಬೈಗೆ ತೆರಳಿದ್ದಾರೆ ಎನ್ನಲಾಗಿದ್ದು, ದುಬೈ ಕನ್ನಡಿಗರ ಜತೆ ಕಾಲ ಕಳೆದ ದರ್ಶನ್ ಹುಲಿಯ ಮೈ ಸವರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ದುಬೈನಲ್ಲಿ ಕೆಲವು ಖಾಸಗಿ ಮೃಗಾಲಯಗಳಲ್ಲಿ ಈ ರೀತಿ ಹುಲಿ ಸಿಂಹಗಳ ಜತೆ ಕಾಲ ಕಳೆಯಬಹುದು. ಹುಲಿಯಂತಹ ಕ್ರೂರ ಪ್ರಾಣಿಗಳೂ ಅಲ್ಲಿ ಸಾಧು ಪ್ರಾಣಿಗಳಾಗಿವೆ. ಅವುಗಳನ್ನು ಸಾಕು ಪ್ರಾಣಿಗಳಂತೆ ಸಾಕಲಾಗುತ್ತದೆ. ಇಲ್ಲಿ ದರ್ಶನ್‌ ಮೈ ಸವರುತ್ತಿರುವ ಹುಲಿಯ ಕೊರಳಿಗೆ ಸರಪಳಿ ಬಿಗಿದಿರುವುದನ್ನು ಗಮನಿಸಬಹುದು. ನಾವು ಸಾಕು ಪ್ರಾಣಿಗಳನ್ನು ಹೇಗೆ ಕಟ್ಟಿ ಹಾಕುತ್ತವೆಯೋ ಅದೇ ರೀತಿ ಅಲ್ಲಿ ಹುಲಿಯ ಕೊರಳಿಗೆ ಸರಪಣಿ ಹಾಕಲಾಗಿದೆ. ವ್ಯಾಘ್ರನ ಕುರಿತು ಕ್ರೂರ ಕಥೆಗಳನ್ನು, ಸುದ್ದಿಗಳನ್ನು ಓದಿರುವ ನಮಗೆ ಈ ರೀತಿ ಕ್ರೂರ ಪ್ರಾಣಿಯೊಂದರ ಮೈ ಸವರಲು ಭಯವಾಗಬಹುದು. ಆದರೆ, ದರ್ಶನ್‌ ಯಾವುದೇ ಭಯವಿಲ್ಲದೆ ತನ್ನ ಅಚ್ಚುಮೆಚ್ಚಿನ ಪ್ರಾಣಿಯ ಮೈ ಸವರಿದ್ದಾರೆ. ಇದೇ ರೀತಿ ವಿವಿಧ ದೇಶಗಳಲ್ಲಿ ಹುಲಿ ಸಿಂಹಗಳ ಜತೆ ಕಾಲ ಕಳೆಯುವ ಅವಕಾಶ ನೀಡಲಾಗುತ್ತದೆ. ಸಾಕಷ್ಟು ಪ್ರವಾಸಿಗರು ಹುಲಿಯನ್ನು ಬೆಕ್ಕಿನ ಮರಿಯಂತೆ ಮೈದಡವಿ ಸಂಭ್ರಮಿಸುತ್ತಾರೆ. ಕರ್ನಾಟಕದಲ್ಲಿ ಅಭೂತಪೂರ್ವ ಗೆಲುವು ಕಂಡಿರುವ ದರ್ಶನ್‌ ನಟನೆಯ ಕಾಟೇರ ಸಿನಿಮಾ ಇತರೆ ರಾಜ್ಯಗಳಲ್ಲೂ ಬಿಡುಗಡೆಯಾಗಿತ್ತು. ಇದಾದ ಬಳಿಕ ಜಾಗತಿಕ ಬಾಕ್ಸ್‌ ಆಫೀಸ್‌ನತ್ತ ಚಿತ್ರತಂಡ ಗಮನ ಹರಿಸಿತ್ತು. ವಿಶೇಷವಾಗಿ ವಿದೇಶದಲ್ಲಿರುವ ಕನ್ನಡಿಗರಿಗೆ ಕಾಟೇರ ನೋಡಲು ಅವಕಾಶ ನೀಡುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿತ್ತು. ಕಾಟೇರ ಸಿನಿಮಾ ದುಬೈನಲ್ಲೂ ಬಿಡುಗಡೆಯಾಗಿ ಹೌಸ್‌ಫುಲ್‌ ಆಗಿತ್ತು. ಇದೇ ಖುಷಿಯಲ್ಲಿ ದರ್ಶನ್‌ ದುಬೈಗೆ ಭೇಟಿ ನೀಡಿ ಅಲ್ಲಿನ ಕನ್ನಡಿಗರನ್ನು ಭೇಟಿಯಾಗಿದ್ದಾರೆ. ದುಬೈ ಕನ್ನಡಿಗರು ಪ್ರೀತಿಯಿಂದ ಇವರಿಗೆ ಕರುನಾಡ ಅಧಿಪತಿ ಎಂಬ ಬಿರುದು ನೀಡಿದ್ದಾರೆ ಎನ್ನಲಾಗಿದೆ.