ನ್ಯೂಸ್ ನಾಟೌಟ್ : ಕನ್ನಡಿಗರು ಖುಷಿ ಪಡುವಂತಹ ವಿಚಾರ. ಭವ್ಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪಿಸುವ ಮುಖ್ಯ ವಿಗ್ರಹವಾಗಿ ಕನ್ನಡಿಗ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ವಿಗ್ರಹ ಆಯ್ಕೆಯಾಗಿದೆ. ಹೀಗಂತ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಮೈಸೂರಿನ ಅರುಣ್ ಯೋಗಿರಾಜ್,ಕರ್ನಾಟಕದ ಇಡಗುಂಜಿಯ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆಗೆ ರಾಮಲಲ್ಲಾ ವಿಗ್ರಹ ಕೆತ್ತನೆ ಜವಾಬ್ದಾರಿ ನೀಡಲಾಗಿತ್ತು.ಈ ಪೈಕಿ ಅರುಣ್ ಯೋಗಿರಾಜ್ ಕೆತ್ತನೆಯ ಕೃಷ್ಣ ಶಿಲೆಯ ಬಾಲರಾಮನ ವಿಗ್ರಹ ಅಂತಿಮವಾಗಿ ಆಯ್ಕೆಯಾಗಿದೆ ಎಂದು ತೀರ್ಥ ಟ್ರಸ್ಟ್ ಹೇಳಿದೆ. ಕೃಷ್ಣಶಿಲೆ ಆಯ್ಕೆಮಾಡಿಕೊಂಡು ಅರುಣ್ ಯೋಗಿರಾಜ್ ಬಾಲರಾಮನ ಮೂರ್ತಿ ಕೆತ್ತನೆ ಆರಂಭಿಸಿದ್ದರು. 6 ತಿಂಗಳಲ್ಲಿ ಈ ವಿಗ್ರಹ ಕೆತ್ತನೆ ಪೂರ್ಣಗೊಳಿಸಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿ.
ಕೊಪ್ಪಳದ ಶಿಲ್ಪಿ ಪ್ರಕಾಶ್ ಗುರುತಿಸಿದ ಕೃಷ್ಣಶಿಲೆಯಲ್ಲಿ ಆಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಲಾಗಿದೆ. 1.5 ಟನ್ ತೂಕದ ಮತ್ತು ಪಾದದಿಂದ ಹಣೆಯವರೆಗೆ 51 ಇಂಚು ಉದ್ದದ ಒಂದು ವಿಗ್ರಹವನ್ನು ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ. ಮುಖದ ಮೃದುತ್ವ, ಕಣ್ಣುಗಳಲ್ಲಿನ ನೋಟ, ನಗು, ದೇಹ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಯೋಗಿರಾಜ್ ಅವರ ಕಪ್ಪು ಶಿಲೆಯ ಬಾಲರಾಮನ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚೆಗಷ್ಟೆ ಅರುಣ್ ಯೋಗಿರಾಜ್ ಕೆತ್ತನೆಯ ಬಾಲರಾಮನ ವಿಗ್ರಹ ಆಯ್ಕಗೊಂಡಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಈ ವೇಳೆ ಸ್ಪಷ್ಟನೆ ನೀಡಿದ ರಾಮಜನ್ಮಭೂಮಿ ಟ್ರಸ್ಟ್, ಟ್ರಸ್ಟ್ ಸಮಿತಿಯ ಸದಸ್ಯರು ವಿಗ್ರಹ ಆಯ್ಕೆಯನ್ನು ಜನವರಿ 15ರೊಳಗೆ ಅಂತಿಮಗೊಳಿಸುತ್ತಾರೆ. ಸದ್ಯ ಯಾವುದೇ ವಿಗ್ರಹ ಆಯ್ಕೆಯಾಗಿಲ್ಲ ಎಂದಿದ್ದರು. ಇದರಂತೆ ಟ್ರಸ್ಟ್ ಇದೀಗ ಯೋಗಿರಾಜ್ ಕೆತ್ತನೆಯ ಬಾಲರಾಮನ ಮೂರ್ತಿಯನ್ನು ಅಂತಿಮಗೊಳಿಸಿದೆ.