ಕರ್ನಾಟಕದ ಶಿಲ್ಪಿ ಕೆತ್ತಿದ ಬಾಲರಾಮನ ವಿಗ್ರಹ ಹೇಗಿದೆ..? ಕೇಂದ್ರ ಸಚಿವೆ ಹಂಚಿಕೊಂಡ ಫೋಟೋಗಳು ಇಲ್ಲಿವೆ

ನ್ಯೂಸ್ ನಾಟೌಟ್: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾಗಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಗೆ ದಿನಗಳು ಹತ್ತಿರ ಬರುತ್ತಿದಂತೆ ವಿಗ್ರಹದ ರೂಪ ನೋಡಲು ಕೋಟ್ಯಾಂತರ ಮಂದಿ ಕಾತುರರಾಗಿದ್ದಾರೆ. ಜ.22 ರಂದು ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ (Ram Lalla Idol) ವಿಗ್ರಹದ ಮೊದಲ ಚಿತ್ರ ವೈರಲ್‌ ಆಗುತ್ತಿದೆ. ಈ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಅವರು ಕೆತ್ತಿದ್ದಾರೆ ಅನ್ನೋದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಜನವರಿ 22 ರಂದು ‘ಪ್ರಾಣ ಪ್ರತಿಷ್ಠೆ’ ಸಮಾರಂಭ ನಡೆಯಲಿದೆ. ಅದಕ್ಕೆ ಕೆಲವು ದಿನಗಳ ಮೊದಲು ಅಂದರೆ ನಿನ್ನೆ (ಗುರುವಾರ ಜ.18) ಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಇರಿಸಲಾಗಿದೆ. ಇಂದು(ಜ.19) ಬೆಳಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಮಲಲ್ಲಾ ವಿಗ್ರಹದ ಮೊದಲ ಫೋಟೋ ಹಂಚಿಕೊಂಡಿದ್ದಾರೆ. ದೇವರನ್ನು ಐದು ವರ್ಷದ ಮಗುವಿನಂತೆ ನಿಂತಿರುವ ಭಂಗಿಯಲ್ಲಿ ರೂಪಿಸಲಾಗಿದೆ. ಈಗ ವಿಗ್ರಹದ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. ಪ್ರಾಣ ಪ್ರತಿಷ್ಠೆ ದಿನದಂದು ವಿಗ್ರಹದ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ತೆಗೆಯಲಾಗುವುದು. ಕಪ್ಪು ಕಲ್ಲಿನಿಂದ 51 ಇಂಚಿನ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ.