ನ್ಯೂಸ್ ನಾಟೌಟ್ :ಇತ್ತೀಚಿನ ದಿನಗಳಲ್ಲಿ ಸ್ವಾರ್ಥ ತುಂಬಿದ ಮನುಷ್ಯನಿಗಿಂತ ಪ್ರಾಣಿಗಳೇ ಎಷ್ಟೋ ಮೇಲು ಅನ್ನಿಸುತ್ತೆ.ಅದಕ್ಕೆ ಅಣ್ಣಾವ್ರು ಒಂದು ಹಾಡಿನಲ್ಲಿ ಗುಣದಲ್ಲಿ ಪ್ರಾಣಿಗಳೇ ಮೇಲು ಎಂದು ಬಣ್ಣಿಸಿದ್ದಾರೆ.ಪ್ರಾಣಿಗಳಿಗಿರುವ ಮಮತೆ,ನಿಸ್ವಾರ್ಥ ಮನಸ್ಸು ಮನುಷ್ಯರಲ್ಲಿ ಕಾಣೋದೇ ಅಪರೂಪ.ಅದರಲ್ಲೂ ಸಾಕು ಪ್ರಾಣಿಗಳಲ್ಲಿ ಅತ್ಯಂತ ನಿಯತ್ತಿನ ಪ್ರಾಣಿ ಎಂದರೆ ಅದು ಶ್ವಾನ.ಆದರೆ ಇಲ್ಲೊಂದು ನಾಯಿಯಿದೆ. ಕೆಲವು ದಿನಗಳ ಹಿಂದಷ್ಟೇ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ದುರಾದೃಷ್ಟವಶಾತ್ ಒಂದು ನಾಯಿ ಮರಿ ಕೊನೆಯುಸಿರೆಳೆದಿತ್ತು. ಉಳಿದೆರಡು ಸಾಕಲು ಬೇರೆಯವರು ತೆಗೆದುಕೊಂಡು ಹೋಗಿದ್ದರು.
ಇದರ ನೋವು ಸಹಿಸಿಕೊಳ್ಳಲಾರದೇ ಏನೋ ವಾರದ ಹಿಂದಷ್ಟೇ ಜನಿಸಿದ ಮೇಕೆ ಮರಿಯೊಂದಿಗೆ ಶ್ವಾನ ಆತ್ಮೀಯತೆಯನ್ನು ಬೆಳೆಸಿಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ಮೇಕೆ ಶ್ವಾನವನ್ನು ಕಂಡು ಓಡೋಡಿ ಬರುತ್ತೆ.ಸದ್ಯ ಶ್ವಾನ ಮರಿಗೆ ಹಾಲುಣಿಸುತ್ತಿದೆ. ಈ ಅಪರೂಪದ ಮಾತೃತ್ವಕ್ಕೆ ಜನರು ಮಾರುಹೋಗಿದ್ದಾರೆ.
ದೊಡ್ಡಬಳ್ಳಾಪುರದ ರಘುನಾಥಪುರದಲ್ಲಿ ಈ ಅಪರೂಪದ ಘಟನೆಗೆ ನಡೆದಿದೆ. ಗ್ರಾಮದ ಕೃಷ್ಣಪ್ರಸಾದ್ ಎಂಬುವವರ ಮನೆಯ ಶ್ವಾನವು ಮೇಕೆ ಮರಿಗೆ ಹಾಲುಣಿಸುತ್ತಿದೆ. ಈ ಮೇಕೆ ಮರಿಯನ್ನು ಕಾಶ್ಮೀರದಿಂದ ಕೃಷ್ಣಪ್ರಸಾದ್ ಅವರು ತೆಗೆದುಕೊಂಡು ಬಂದಿದ್ದಾರೆ.ಇದು ಜನ್ಮ ನೀಡಿದ ತಾಯಿಗಿಂತ ನಾಯಿಯೊಂದಿಗೆ ಹೆಚ್ಚು ಒಡನಾಟವನ್ನು ಹೊಂದಿದ್ದು ವಿಶೇಷ. ಶ್ವಾನದ ಮೊಲೆಹಾಲು ಕುಡಿಯುವ ಮೇಕೆ ಮರಿಯನ್ನು ನೋಡುವುದೇ ಜನರಿಗೆ ಆಶ್ಚರ್ಯದ ಸಂಗತಿಯಾಗಿದೆ. ಇಷ್ಟೇ ಅಲ್ಲ ದೊಡ್ಡಿಯಲ್ಲಿರುವ ಮೇಕೆಗಳ ಕಾವಲು ಕೂಡಾ ಈ ಶ್ವಾನವೇ ಕಾಯುತ್ತದೆ. ಯಾರೇ ಅಪರಿಚಿತರು ಬಂದರೂ ಮೇಕೆಗಳನ್ನು ಮುಟ್ಟಲು ಬಿಡುವುದಿಲ್ಲವಂತೆ.ಮೇಕೆಮರಿ ಮತ್ತು ಶ್ವಾನದ ವಾತ್ಸಲ್ಯವು ಎಲ್ಲರಿಗೂ ಮಾದರಿಯೆಂಬಂತಿದೆ.