ನ್ಯೂಸ್ ನಾಟೌಟ್ : ನಿಜಕ್ಕೂ ಇದೊಂದು ಮನಕಲಕುವ ಸನ್ನಿವೇಶ.ಎಂಥವರ ಹೊಟ್ಟೆಯಾದರೂ ಚುರ್ರೆನ್ನದಿರದು.ಹೆತ್ತ ತಾಯಿ ದೇವರಿಗೆ ಸಮಾನ.ಆಕೆಗಾಗಿ ಮಕ್ಕಳು ಪ್ರಾಣ ಕೊಡೋದಕ್ಕು ಹೇಸೋದಿಲ್ಲ.ಆದರೆ ಇಲ್ಲೊಬ್ಬಳು ತಾಯಿಯಿದ್ದಾಳೆ ಒಂದಲ್ಲ, ಎರಡಲ್ಲ, 7 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.ಮಕ್ಕಳನ್ನು ಹೆತ್ತು-ಹೊತ್ತು , ಸಾಕಿ-ಸಲಹಿ ಮುದ್ದಿನಿಂದ ಲಾಲನೆ-ಪಾಲನೆ ಮಾಡಿದಳು.ಆದರೆ ವೃದ್ದಾಪ್ಯದ ಸಮಯದಲ್ಲಿ ಆಕೆ ಸೇರಿದ್ದು ಅನಾಥಾಶ್ರಮವನ್ನ..!ಮಾತ್ರವಲ್ಲ ಕೊನೆಯುಸಿರೆಳೆದಾಗಲೂ ಆಕೆಯ ಮುಖವನ್ನು ನೋಡಲು ಮಕ್ಕಳು ಬಂದಿಲ್ಲ ಅನ್ನೋದು ಖೇಧಕರ ಸಂಗತಿ.ಇಂತಹ ಘಟನೆ ನಡೆದಿರೋದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ..!
ಈ ತಾಯಿಗೆ 90 ವರ್ಷವಾಗಿದ್ದು,ವೃದ್ಧಾಪ್ಯದ ಕಿರಿಕಿರಿ ಯಿಂದ ಮಕ್ಕಳಿಗೆ ಬೇಡವಾಗಿ ಅನಾಥಶ್ರಮ ಸೇರಿದ್ದರು.ಇವರ ಹೆಸರು ಲಕ್ಷ್ಮೀ ಹೆಗ್ಡೆ ಹೃದಯಾಘಾತದಿಂದ ರವಿವಾರ ಬಾರದ ಲೋಕಕ್ಕೆ ತೆರಳಿದರು. ಅವರಿಗೆ 7 ಮಕ್ಕಳಿದ್ದರೂ ಯಾರೂ ಅಂತಿಮ ಕಾರ್ಯಕ್ಕೆ ಆಗಮಿಸದ ಕಾರಣ ಅನಾಥಾಶ್ರಮದವರೇ ಕಾರ್ಯವನ್ನು ನೆರವೇರಿಸಿದ ಹೃದಯ ಹಿಂಡುವ ಘಟನೆ ವರದಿಯಾಗಿದೆ.ಉಪ್ಪಿನಂಗಡಿ ಬಳಿಯ ಇಳಂತಿಲದಲ್ಲಿ ಲಕ್ಷ್ಮೀ ಹೆಗ್ಡೆ ಸ್ವಂತ ಮನೆಯನ್ನು ಹೊಂದಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ ಅಸಹಾಯಕತೆಗೆ ಸಿಲುಕಿದ ಇವರು ನ್ಯಾಯ ಬಯಸಿ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಏರಿದ್ದರು.ಮಕ್ಕಳನ್ನು ಕರೆದು ಹೆತ್ತಮ್ಮನ ರಕ್ಷಣೆಯ ಕರ್ತವ್ಯ ನಿರ್ವಹಿಸಿ ಎಂದು ಮಕ್ಕಳಿಗೆ ಸೂಚಿಸಿದಾಗ ಮಕ್ಕಳಿಂದ ಅಸಹಕಾರ ವ್ಯಕ್ತವಾಗಿತ್ತು ಎನ್ನಲಾಗಿದೆ.
ಆ ಬಳಿಕ ಆಗಿನ ಠಾಣಾಧಿಕಾರಿ ನಂದ ಕುಮಾರ್ ಲಕ್ಷ್ಮೀ ಹೆಗ್ಡೆ ಅವರನ್ನು ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದರಲ್ಲದೇ ಮಗನ ಸ್ಥಾನದಲ್ಲಿ ನಿಂತು ಆಶ್ರಮಕ್ಕೆ ಭೇಟಿ ನೀಡಿ ಯೋಗಕ್ಷೇಮವನ್ನೂ ವಿಚಾರಿಸುತ್ತಿದ್ದರು.ಲಕ್ಷ್ಮೀ ಹೆಗ್ಡೆ ಉಸಿರು ಚೆಲ್ಲಿದ ಬಳಿಕ ಅಂತಿಮ ವಿಧಿ ನೆರವೇರಿಸಲು ಸಂಬಂಧಿಕರ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಯಾವುದೇ ಸ್ಪಂದನೆ ದೊರೆಯಲಿಲ್ಲ. ಆಗ ಅವರ ಬಗ್ಗೆ ಕಾಳಜಿ ವಹಿಸಿದ್ದ ಪೊಲೀಸ್ ಅಧಿಕಾರಿ ನಂದಕುಮಾರ್ ಅವರನ್ನು ಸಂಪರ್ಕಿಸಿದಾಗ, ಕರ್ತವ್ಯದ ಕಾರಣಕ್ಕೆ ದೂರದಲ್ಲಿ ಇದ್ದ ಕಾರಣ ಸಕಾಲದಲ್ಲಿ ತಲುಪಲು ಅಸಾಧ್ಯವಾಗಿತ್ತು. ಹೀಗಾಗಿ ಆಶ್ರಮದ ಕ್ರಮದಂತೆ ಅಂತಿಮ ವಿಧಿವಿಧಾನ ಅಲ್ಲಿಯೇ ನೆರವೇರಿಸಲಾಯಿತು.