ನ್ಯೂಸ್ ನಾಟೌಟ್ : ಎರಡು ಅಪಘಾತಗಳು ಒಂದೇ ಪ್ರದೇಶದಲ್ಲಿ ನಡೆದ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆಯಲ್ಲಿ ಸಂಭವಿಸಿದೆ. ಜ.8ರ ಸಂಜೆ ಪೆರ್ನೆ ಜಂಕ್ಷನ್ನಿಂದ ಕೆಲವೇ ದೂರದಲ್ಲಿ ಈ ಅಪಘಾತಗಳು ಸಂಭವಿಸಿದ್ದು,ಯಾವುದೇ ಅಪಾಯವಾಗಿಲ್ಲವೆಂದು ತಿಳಿದು ಬಂದಿದೆ.
ನಿಲ್ಲಿಸಿದ್ದ ಈಚರ್ ಲಾರಿಯೊಂದು ಇಳಿಜಾರು ಪ್ರದೇಶದಲ್ಲಿ ತನ್ನಷ್ಟಕ್ಕೆ ಹಿಮ್ಮುಖವಾಗಿ ಚಲಿಸಿತ್ತು.ಬಳಿಕ ರಸ್ತೆ ಬದಿಯಲ್ಲಿದ್ದ ಚಂದ್ರಶೇಖರ್ ಅವರ ಗ್ಯಾರೇಜಿಗೆ ನುಗ್ಗಿದೆ. ಈ ಸಂದರ್ಭ ಗ್ಯಾರೇಜ್ನಲ್ಲಿ ಯಾರೂ ಇಲ್ಲದ್ದರಿಂದ ಏನೂ ತೊಂದರೆಯಾಗಿಲ್ಲ.ಆದರೆ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಎರಡು ಬೈಕ್ಗಳಿಗೆ ಹಾಗೂ ಗ್ಯಾರೇಜ್ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಇದು ನಡೆದ ಕೆಲವೇ ಕ್ಷಣಗಳಲ್ಲಿ ಅದೇ ಪ್ರದೇಶದಲ್ಲಿ ಉಪ್ಪಿನಂಗಡಿಯಿಂದ ಮಾಣಿ ಕಡೆಗೆ ತೆರಳುತ್ತಿದ್ದ ಮಿನಿ ಟೆಂಪೋವೊಂದರ ಬ್ರೇಕ್ ವೈಫಲ್ಯಗೊಂಡಿತ್ತು. ಈ ಸಂದರ್ಭ ಗ್ಯಾರೇಜ್ಗೆ ಲಾರಿ ನುಗ್ಗಿದ್ದರಿಂದ ಅಲ್ಲಿ ಜನಸಂದಣಿ ಸೇರಿತ್ತು. ಆಗ ಸಮಯ ಪ್ರಜ್ಞೆ ಮೆರೆದ ಮಿನಿ ಟೆಂಪೋ ಚಾಲಕ ಇನ್ನೊಂದು ಬದಿಗೆ ಮಿನಿ ಟೆಂಪೋವನ್ನು ಚಲಾಯಿಸಿದ್ದಾನೆ. ಅದು ಅಲ್ಲಿಯೇ ಇದ್ದ ಗದ್ದೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಹೀಗೊಂದು ಗ್ಯಾರೇಜ್ ಕಥೆ: ಪೆರ್ನೆ ಬಳಿ ಕಳೆದ 10 ವರ್ಷಗಳ ಹಿಂದೆ ಗ್ಯಾಸ್ ಟ್ಯಾಂಕರ್ ಒಂದು ಉರುಳಿ ಬಿದ್ದು ಭಾರಿ ನಷ್ಟ ಸಂಭವಿಸಿತ್ತು.ಆಗ ಚಂದ್ರಶೇಖರ್ರವರು ಅಲ್ಲೇ ಸಮೀಪದಲ್ಲಿಯೇ ಗ್ಯಾರೇಜ್ ಇಟ್ಟುಕೊಂಡಿದ್ದರು.ಉಳಿದೆಡೆ ಬೆಂಕಿ ಹತ್ತಿಕೊಂಡು ಹಲವರಿಗೆ ಭಾರೀ ಹಾನಿ ಸಂಭವಿಸಿದಲ್ಲದೆ,ಇವರ ಗ್ಯಾರೇಜ್ ಕೂಡಾ ಸುಟ್ಟು ಹೋಗಿತ್ತು. ಬಳಿಕ ಚಂದ್ರಶೇಖರ್ ಅವರು ಆ ಸ್ಥಳ ಬಿಟ್ಟು ಪೆರ್ನೆಯ ಕಟ್ಟಡವೊಂದರಲ್ಲಿ ಗ್ಯಾರೇಜ್ ಆರಂಭಿಸಿದ್ದರು. ಅದು ಕೂಡಾ ಒಂದು ದಿನ ರಾತ್ರಿ ಸಮಯದಲ್ಲಿ ಆಕಸ್ಮಿಕವಾಗಿ ಉಂಟಾದ ಬೆಂಕಿಗೆ ಆಹುತಿಯಾಗಿತ್ತು. ಬಳಿಕ ಈ ಗ್ಯಾರೇಜ್ ಈಗ ಇದ್ದ ಸ್ಥಳಕ್ಕೆ ಸ್ಥಳಾಂತರವಾಗಿದ್ದು, ಇದು ಕೂಡಾ ಲಾರಿ ನುಗ್ಗಿ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಈ ಮೂರು ಅವಘಡಗಳು ಸಂಭವಿಸಿದಾಗಲೂ ಚಂದ್ರಶೇಖರ್ ಅವರು ಸ್ಥಳದಲ್ಲಿಲ್ಲದ ಕಾರಣದಿಂದ ಅಪಾಯದಿಂದ ಪಾರಾಗಿದ್ದಾರೆ.