ನ್ಯೂಸ್ ನಾಟೌಟ್: ಐಟಿ ಸಂಸ್ಥೆ ಇನ್ಫೋಸಿಸ್ ತೆರಿಗೆ ವಂಚನೆ ಆರೋಪದಲ್ಲಿ ಅಮೇರಿಕಾದಲ್ಲಿ ಸಿಕ್ಕಿ ಬಿದ್ದಿದ್ದು, ಉದ್ಯಮ ತೆರಿಗೆಯನ್ನು ನಿಗದಿತ ಮೊತ್ತಕ್ಕಿಂತ ಕಡಿಮೆ ಪಾವತಿ ಮಾಡಿರುವ ಆರೋಪ ಇನ್ಫೋಸಿಸ್ ವಿರುದ್ಧ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಅಮೆರಿಕದ ತೆರಿಗೆ ಪ್ರಾಧಿಕಾರವು ಇನ್ಫೋಸಿಸ್ ಸಂಸ್ಥೆಗೆ 225 ಅಮೆರಿಕನ್ ಡಾಲರ್ ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ.
ಭಾರತೀಯ ರೂಪಾಯಿಗಳ ಲೆಕ್ಕದಲ್ಲಿ ಹೇಳೋದಾದರೆ ಇನ್ಫೋಸಿಸ್ ಸಂಸ್ಥೆಯು 18,702 ರೂಪಾಯಿ ದಂಡ ಪಾವತಿ ಮಾಡಬೇಕಿದೆ. ಇನ್ಫೋಸಿಸ್ ಸಂಸ್ಥೆಯ ಒಟ್ಟಾರೆ ವಹಿವಾಟಿನ ಗಾತ್ರಕ್ಕೆ ಹೋಲಿಸಿದರೆ ಈ ಮೊತ್ತ ಅತಿ ಸಣ್ಣದಾದರೂ ಕೂಡಾ ತೆರಿಗೆ ಪಾವತಿ ವಿಚಾರದಲ್ಲಿ ಅಕ್ರಮ ಎಸಗಿದ ಗುರುತರ ಆಪಾದನೆ ಬೆಂಗಳೂರು ಮೂಲದ ಈ ಪ್ರತಿಷ್ಠಿತ ಸಂಸ್ಥೆಯ ಹೆಗಲೇರಿದಂತಾಗಿದೆ.
ಇನ್ಫೋಸಿಸ್ ಸಂಸ್ಥೆಯು ಅಮೆರಿಕದಲ್ಲಿ ತನ್ನ ವಹಿವಾಟು ನಡೆಸುವ ಹಿನ್ನೆಲೆಯಲ್ಲಿ ಉದ್ಯಮ ತೆರಿಗೆ ಪಾವತಿ ಮಾಡಬೇಕು. ಆದರೆ ತೆರಿಗೆ ಪಾವತಿ ಮಾಡುವ ವೇಳೆ ಇನ್ವಾಯ್ಸ್ನಲ್ಲಿ ನಮೂದಾಗಿದ್ದ ಮೊತ್ತಕ್ಕಿಂತ ಕಡಿಮೆ ಹಣವನ್ನು ಇನ್ಫೋಸಿಸ್ ಪಾವತಿ ಮಾಡಿದೆ ಎನ್ನಲಾಗಿದೆ.
ಇದನ್ನು ಶಾರ್ಟ್ ಪೇಮೆಂಟ್ ಎನ್ನಲಾಗುತ್ತದೆ. ಇನ್ಫೋಸಿಸ್ ವಿರುದ್ಧದ ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಂಡ ವಿಧಿಸಿರುವುದಾಗಿ ಅಮೆರಿಕದ ತೆರಿಗೆ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ನೆವಾಡಾ ತೆರಿಗೆ ವಿಭಾಗದಿಂದ ಈ ದಂಡದ ನೋಟಿಸ್ ನೀಡಲಾಗಿದೆ.