- +91 73497 60202
- [email protected]
- November 22, 2024 7:54 PM
ಬಲವಂತವಾಗಿ ಹನುಮಧ್ವಜ ಕೆಳಗಿಳಿಸಿದ ಪೊಲೀಸರು..! ಲಾಠಿ ಚಾರ್ಜ್, ನಿಷೇಧಾಜ್ಞೆ ಜಾರಿ!
ನ್ಯೂಸ್ ನಾಟೌಟ್ : 108 ಅಡಿ ಎತ್ತರದಲ್ಲಿದ್ದ ಹನುಮಧ್ವಜವನ್ನು ಪೊಲೀಸರು (Mandya Police) ಕೆಳಗಿಳಿಸಿದ ಘಟನೆ ಮಂಡ್ಯ (Mandya) ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ನಡೆದಿದೆ. ಪ್ರತಿಭಟನೆಯ ಜೊತೆಗೆ ಜನರ ಆಕ್ರೋಶ ಹೆಚ್ಚಾಗಿದ್ದು ಜಿಲ್ಲಾಡಳಿತದ ಕೆರಗೋಡು ಗ್ರಾಮದಲ್ಲಿ ಸೆಕ್ಷನ್ 144 (144 Section) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಮಂಡ್ಯ ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ಕೆಳಗಿಳಿಸುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಜನ ತಿರುಗಿಬಿದ್ದಿದ್ದಾರೆ. ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಧುಮುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೆರಗೋಡಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು, ಸ್ಥಳದಲ್ಲಿ ನೂರಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಪರಿಸ್ಥಿತಿಯನ್ನ ತಿಳಿಗೊಳಿಸಲು ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಲ್ಲದೇ ಶ್ರೀರಾಮನ ಬ್ಯಾನರ್ ಕಿತ್ತು ಹಾಕಿದ್ದಾರೆ. ಬೃಹತ್ ಧ್ವಜಸ್ತಂಬವನ್ನು ಕಟ್ ಮಾಡೋದಕ್ಕೆ ಗ್ಯಾಸ್‌ಕಟ್ಟರ್ ತರಿಸಿದ್ದಾರೆ. ಹನುಮ ಧ್ವಜ ಇಳಿಸಿದ್ದರ ವಿರುದ್ಧ ಆಕ್ರೋಶ ಹೊರಹಾಕಿದ ಕೆರೆಗೋಡು ಗ್ರಾಮಸ್ಥರು ಮಂಡ್ಯ-ಯಡಿಯೂರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕೈ ಶಾಸಕ ಗಣಿಗ ರವಿಕುಮಾರ್ ಫ್ಲೆಕ್ಸ್ ಹರಿದು, ಒಲೆ ಹಚ್ಚಿ, ರಸ್ತೆಯಲ್ಲೇ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಹನುಮನ ದೇವಸ್ಥಾನದ ಮುಂಭಾಗದಲ್ಲಿ ಯುವಕರೊಟ್ಟಿಗೆ ಮಹಿಳೆಯರೂ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಆದ್ರೆ ಇದಕ್ಕೆ ಆಸ್ಪದ ನೀಡದ ಪೊಲೀಸರು ಅಡುಗೆ ಮಾಡುವುದನ್ನ ತಡೆದಿದ್ದಾರೆ. ಅಡುಗೆ ಪಾತ್ರೆಗಳಲ್ಲಿದ್ದ ನೀರನ್ನುಸುರಿದು, ಪಾತ್ರೆಯನ್ನ ಹೊತ್ತೊಯ್ದಿದ್ದಾರೆ. ಈ ಬಗ್ಗೆ ರಾಜಕೀಯ ಆರೋಪ ಪ್ರತ್ಯಾರೋಪಗಳು ಜೋರಾಗಿವೆ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ