ನ್ಯೂಸ್ ನಾಟೌಟ್ : ಮಹಿಳೆಯೊಬ್ಬಳು ವಿವಾಹವಾದ ಐದೇ ತಿಂಗಳಲ್ಲಿ ಗಂಡನಿಂದ ವಿಚ್ಛೇದನ ಕೋರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಇದರ ಕಾರಣ ನಿಜಕ್ಕೂ ವಿಚಿತ್ರವಾಗಿದೆ.
ಹನಿಮೂನ್ಗೆ ಗೋವಾದ ಬದಲು ಅಯೋಧ್ಯೆಗೆ ಕರೆದೊಯ್ದದ್ದು ಹೆಂಡತಿಗೆ ಸಿಟ್ಟು ಬಂದಿದೆ ಈ ಕಾರಣಕ್ಕೆ ವಿಚ್ಛೇದನ ಕೇಳಿದ್ದಾಳೆ ಎನ್ನಲಾಗಿದೆ.
ಜನವರಿ 19ರಂದು ಭೋಪಾಲ್ ಕೌಟುಂಬಿಕ ನ್ಯಾಯಾಲಯಕ್ಕೆ ಈ ವಿಚಿತ್ರ ಪ್ರಕರಣವು ಬಂದಿದ್ದು, ಇವರಿಗೆ ಮದುವೆಯಾಗಿ ಐದು ತಿಂಗಳಾಗಿದೆ ಅಷ್ಟೇ. ಹನಿಮೂನ್ಗೆ ಗೋವಾಕ್ಕೆ ಕರೆದೊಯ್ಯುವುದಾಗಿ ಗಂಡ ಭರವಸೆ ನೀಡಿದ್ದ. ಆದರೆ ಅದರ ಬದಲಿಗೆ ಅಯೋಧ್ಯೆ ಮತ್ತು ವಾರಣಾಸಿಗೆ ಕರೆದೊಯ್ದಿದ್ದನಂತೆ. ಸಿಟ್ಟಿಗೆದ್ದ ಪತ್ನಿ ಪ್ರವಾಸದಿಂದ ಹಿಂದಿರುಗಿದ 10 ದಿನಗಳ ನಂತರ ಡೈವೋರ್ಸ್ಗೆ ಅರ್ಜಿ ಹಾಕಿದ್ದಾಳೆ ಎನ್ನಲಾಗಿದೆ.
ತನ್ನ ಪತಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಉತ್ತಮ ಸಂಬಳ ಪಡೆಯುತ್ತಿದ್ದಾನೆ ಎಂದು ಮಹಿಳೆ ವಿಚ್ಛೇದನ ಅರ್ಜಿಯಲ್ಲಿ ತಿಳಿಸಿದ್ದಾಳೆ. ಆಕೆಯೂ ದುಡಿಯುವ ಮಹಿಳೆಯಾಗಿದ್ದು, ಸಂಪಾದನೆ ಚೆನ್ನಾಗಿದೆ. ಹನಿಮೂನ್ಗೆ ವಿದೇಶಕ್ಕೆ ಹೋಗುವುದು ಇವರಿಗೆ ಕಷ್ಟದ ವಿಷಯವಾಗಿರಲಿಲ್ಲ. ಆದರೆ ಯಾವುದೇ ಹಣಕಾಸಿನ ಅಡಚಣೆಯ ಹೊರತಾಗಿಯೂ ಗಂಡ ಅವಳನ್ನು ವಿದೇಶಕ್ಕೆ ಕರೆದೊಯ್ಯಲು ನಿರಾಕರಿದ್ದ ಮತ್ತು ಭಾರತದಲ್ಲಿಯೇ ಒಂದು ಸ್ಥಳ ಆಯ್ದುಕೊಳ್ಳುವಂತೆ ಮಾಡಿದ್ದ. ಹೆತ್ತವರನ್ನು ನೋಡಿಕೊಳ್ಳಬೇಕು ಎಂಬ ಕಾರಣ ನೀಡಿದ್ದ. ನಂತರ ದಂಪತಿ ತಮ್ಮ ಹನಿಮೂನ್ಗೆ ಗೋವಾ ಅಥವಾ ದಕ್ಷಿಣ ಭಾರತ ಆಯ್ದುಕೊಂಡಿದ್ದರು ಎನ್ನಲಾಗಿದೆ.
ಆದರೂ ಗಂಡ, ಹೆಂಡತಿಗೆ ಹೇಳದೆ ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದ. ಬದಲಾದ ಪ್ರಯಾಣದ ಯೋಜನೆಯ ಬಗ್ಗೆ ಹೆಂಡತಿಗೆ ಕೇವಲ ಒಂದು ದಿನದ ಮೊದಲು ತಿಳಿಸಿದ್ದ. ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಮೊದಲು ಅಯೋಧ್ಯೆಗೆ ದಂಪತಿ ಭೇಟಿ ನೀಡುವಂತೆ ತನ್ನ ತಾಯಿ ಬಯಸಿದ್ದರಿಂದ ಅಯೋಧ್ಯೆಗೆ ಹೋಗುತ್ತಿದ್ದೇವೆ ಎಂದು ಹೇಳಿದ್ದ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾಳೆ.
ಪತ್ನಿಗೆ ಶಾಕ್ ಆಗಿದ್ದರೂ ಆ ಸಮಯದಲ್ಲಿ ಪ್ರವಾಸಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ. ಯಾವುದೇ ತಕರಾರು ಮಾಡದೆ ಪ್ರವಾಸಕ್ಕೆ ಹೋಗಿದ್ದಳು. ಆದರೆ ಯಾತ್ರಾ ಸ್ಥಳದಿಂದ ಹಿಂತಿರುಗಿದ ಕೂಡಲೇ ಆಕೆ ತನ್ನ ಪತಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾಳೆ ಎನ್ನಲಾಗಿದೆ.