ನ್ಯೂಸ್ ನಾಟೌಟ್:ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿದ್ದಂತೆ ರಾಮಮಂದಿರ ಸಂಕೀರ್ಣದಲ್ಲಿ ನಿರ್ಮಾಣ ಮಾಡಲಾಗಿರುವ ಜಟಾಯು ಪಕ್ಷಿಯ ಪ್ರತಿಮೆಯನ್ನು ಮೋದಿ ಸೋಮವಾರ ಅನಾವರಣಗೊಳಿಸಿದರು. ರಾಮಾಯಣದ ಕಥೆಯಲ್ಲಿ ನೀವು ಕೇಳಿರುವಂತೆ ಸೀತೆಯನ್ನು ರಾಮ ಹೊತ್ತೊಯ್ಯುತ್ತಿದ್ದಾಗ, ಸೀತೆಯ ರಕ್ಷಣೆಗೆ ಧಾವಿಸಿದ ಜಟಾಯು ರಾವಣನಿಂದ ಕೊನೆಯುಸಿರೆಳೆದಿತ್ತು.ಈ ಮಹತ್ವವನ್ನು ಸಾರುವ ಪ್ರತಿಮೆ ಅನಾವರಣವನ್ನು ಮಾಡಲಾಯಿತು. ಬಳಿಕ ಮಾತನಾಡಿದ ಮೋದಿ, ಜಟಾಯು ಕರ್ತವ್ಯದ ಪ್ರತೀಕವಾಗಿದೆ ಎಂದು ಹೇಳಿದರು.
ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿರುವ ಸಮಯದಲ್ಲಿ ಆಗಸದಲ್ಲಿ ಹದ್ದೊಂದು ಹಾರಾಡಿ ಭಾರಿ ಗಮನ ಸೆಳೆದಿದೆ. ಹಿಂದೂ ಪುರಾಣದ ಪ್ರಕಾರ ಗರುಡ(ಹದ್ದು) ವಿಷ್ಣುವಿನ ವಾಹನವಾಗಿದ್ದು, ಅದು ಶ್ರೀರಾಮನನ್ನು ಕಾವಲು ಕಾಯುವ ಸಂಕೇತವಾಗಿದೆ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಸಂತರು ಬಣ್ಣಿಸಿದ್ದಾರೆ. ರಾಮಾಯಣದಲ್ಲೂ ಸಹ ರಾಮ ಮತ್ತು ಲಕ್ಷ್ಮಣರನ್ನು ಲಂಕೇಶ್ವರನಾದ ರಾವಣ ನಾಗಾಸ್ತ್ರದಿಂದ ಬಂಧಿಸಿದಾಗ, ಗರುಡವೇ ಬಂದು ಅವರನ್ನು ಬಂಧಮುಕ್ತಗೊಳಿಸಿತು ಎನ್ನಲಾಗಿದೆ.