ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಇದೇ ಪ್ರಥಮ ಬಾರಿಗೆ ಎಂಬಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಾಗೂ ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ವತಿಯಿಂದ ಅಂತರ್ ಕಾಲೇಜು ಮಹಿಳಾ ಮತ್ತು ಪುರುಷರ ಗುಡ್ಡಗಾಡು ಓಟ ಜನವರಿ 20 ರಂದು ಸುಳ್ಯದಲ್ಲಿ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ ಕೆ.ವಿ.ಜಿ. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ಉದಯಕೃಷ್ಣ.ಬಿ. “ಸುಳ್ಯದಲ್ಲಿ ಪ್ರಥಮ ಬಾರಿಗೆ ನಡೆಯುವ ಕಾನೂನು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯ ಬಳಿಕ ಅಂತರ್ ವಿ.ವಿ. ಸ್ಪರ್ಧೆಯಲ್ಲಿ ಭಾಗವಹಿಸುವ ಕಾನೂನು ವಿಶ್ವವಿದ್ಯಾನಿಲಯ ಮಟ್ಟದ ಕ್ರಾಸ್ ಕಂಟ್ರಿ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು. ಈಗಾಗಲೇ 16 ತಂಡ ತಮ್ಮ ಹೆಸರು ನೊಂದಾಯಿಸಿದ್ದಾರೆ. 130 ಕಾನೂನು ಮಹಾವಿದ್ಯಾಲಯಗಳಿಗೆ ಆಹ್ವಾನ ನೀಡಲಾಗಿದೆ ಮಾತ್ರವಲ್ಲ 30ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದವರು ಹೇಳಿದರು.
ಜ.19ರಂದು ಎಲ್ಲಾ ತಂಡಗಳು ನೋಂದಾವಣೆ ಮಾಡಿದ ಬಳಿಕ ಅವರಿಗೆ ಗುಡ್ಡಗಾಡು ಓಟಕ್ಕೆ ಆಯ್ಕೆ ಮಾಡಿದ ಮಾರ್ಗವನ್ನು ಪರಿಚಯಿಸಲಾಗುತ್ತದೆ.ಇನ್ನು ಜ.20ರಂದು ಶನಿವಾರ ಬೆಳಗ್ಗೆ 7 ಗಂಟೆಗೆ ಓಟ ಪ್ರಾರಂಭವಾಗಲಿದೆ ಮತ್ತು 8.30 ರೊಳಗೆ ಕೊನೆಗೊಳ್ಳಲಿದೆ.ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆ 10 ಕಿಲೋಮೀಟರ್ ದೂರವನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದರು.
ಇತ್ತ ಪುರುಷರ ತಂಡದಲ್ಲಿ ಗರಿಷ್ಠ 9 ಮಂದಿ ಹಾಗೂ ಕನಿಷ್ಠ 6 ಮಂದಿ ಭಾಗವಹಿಸಬೇಕು.ಮಹಿಳಾ ತಂಡದಲ್ಲಿ ಕನಿಷ್ಠ 4 ಮಂದಿ ಹಾಗೂ ಗರಿಷ್ಠ 6 ಮಂದಿ ಇರಬೇಕು ಎಂದರು.ವಿಜೇತರಿಗೆ ವೈಯುಕ್ತಿಕ ಬಹುಮಾನ, ಕಾಲೇಜಿಗೆ ಸಮಗ್ರ ಪ್ರಶಸ್ತಿ ನೀಡಲಾಗುತ್ತದೆ. ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಕೆವಿಜಿ ಕಾನೂನು ಕಾಲೇಜಿನ ಪುರುಷ, ಮಹಿಳಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ. 2018ರಲ್ಲಿ ಕೆವಿಜಿ ಕಾನೂನು ಕಾಲೇಜು ವಿವಿ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು ಎಂದು ಹೇಳಿದರು.
ಜ.20ರಂದು ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಕೆ.ವಿ.ಜಿ.ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದ್ದು, ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕ ಹಾಗೂ ಚಿತ್ರ ನಟ ಪ್ರಕಾಶ್ ತುಮಿನಾಡು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ, ರಾಷ್ಟ್ರೀಯ ಕ್ರೀಡಾಪಟು ನಮಿತಾ ಜಿ.ಕೆ., ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವ ವಿದ್ಯಾನಿಲಯದ ಕ್ರೀಡಾ ನಿರ್ದೇಶಕ ಡಾ.ಖಾಲಿದ್ ಖಾನ್ ಉಪಸ್ಥಿತರಿರುವರು ಎಂದು ಪ್ರೊ.ಉದಯಕೃಷ್ಣ ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಸ್ಟೂಡೆಂಟ್ ವೆಲ್ಫೇರ್ ಆಫೀಸರ್ ಟೀನಾ ಎಚ್.ಎಸ್, ದೈಹಿಕ ಶಿಕ್ಷಣ ನಿರ್ದೇಶಕರಾದ ಲೆಫ್ಟಿನೆಂಟ್ ಸೀತಾರಾಮ ಎಂ.ಡಿ., ನಾಗರಾಜ್ ನಾಯ್ಕ ,ಮಿಥುನ್ ಎಸ್, ಕೆವಿಜಿ ಕಾನೂನು ಕಾಲೇಜಿನ ಅಧೀಕ್ಷಕರಾದ ಗೋಪಿನಾಥ್ ಕೆ,ಕ್ರೀಡಾ ಸಂಯೋಜಕರಾದ ಲಕ್ಷ್ಮೀಕಾಂತ್ ಕೆ.ಎಲ್. ಉಪಸ್ಥಿತರಿದ್ದರು.