ನ್ಯೂಸ್ ನಾಟೌಟ್ : ಛಲ ಅನ್ನುವಂಥದ್ದು ಕೆಲವರ ರಕ್ತದಲ್ಲೇ ಇರುತ್ತೆ.ಸಾಧನೆ ಮಾಡೋದಕ್ಕೆ ಹೊರಟವನು ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ ಮುಂದಕ್ಕೆ ಚಲಿಸುತ್ತಿರುತ್ತಾನೆ.ತಾನು ಇದೇ ಕೆಲಸಕ್ಕೆ ಸೀಮಿತ ಅಂದು ಕೊಂಡರೆ ಯಶಸ್ಸು ಸಿಗೋದಕ್ಕೆ ಖಂಡಿತ ಸಾಧ್ಯವಿಲ್ಲ.ಪ್ರತಿದಿನವೂ ಕಲಿಕೆ, ಶ್ರಮ ಹಾಗೂ ಜೀವನದಲ್ಲಿ ಮುಂದೆ ಬರಬೇಕೆನ್ನುವ ಹಂಬಲವಿದ್ದರೆ ನಾವು ಅಂದು ಕೊಂಡಿರೋ ಕನಸುಗಳನ್ನು ಈಡೇರಿಸಲು ಸಾದ್ಯವಿದೆ.ಅಂತೆಯೇ ಇಲ್ಲೊಬ್ಬ ವ್ಯಕ್ತಿಯಿದ್ದಾರೆ. ಕೂಲಿ ವೃತ್ತಿ ಮಾಡುತ್ತಲೇ ಕಠಿನ ಅಭ್ಯಾಸ ಬಲದಿಂದ 2024 ಫೆ. 18ರಂದು ಥೈಲ್ಯಾಂಡ್ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಾಸ್ಟರ್ ಆ್ಯತ್ಲೆಟಿಕ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಇದನ್ನು ಕೇಳಿದ್ರೆ ನಿಮ್ಗೆ ಶಾಕ್ ಆಗಿರಬೇಕಲ್ವ? ಹೌದು,ಇವರದ್ದು ವಯಸ್ಸಿಗೂ ಮೀರಿದ ಸಾಧನೆ.ಉಡುಪಿ ಜಿಲ್ಲೆಯ ಸಾಲಿಗ್ರಾಮ ಪ.ಪಂ.ವ್ಯಾಪ್ತಿಯ ಗುಂಡ್ಮಿಯ 60ರ ಹರೆಯದ ವಿಟ್ಠಲ ಶೆಟ್ಟಿಗಾರ್ ಎಂಬುವವರೇ ಈ ಸಾಧನೆ ಮಾಡಿರೋ ವ್ಯಕ್ತಿ.ಬಡತನದಲ್ಲಿ ಜೀವನ ನಡೆಸುವ ಶೆಟ್ಟಿಗಾರ್ರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಇಷ್ಟು ವರ್ಷ ಕೂಲಿ ಕೆಲಸ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದವರಿಗೆ ಇದೀಗ ಅದೃಷ್ಟ ಒಲಿದು ಬಂದಿದೆ. ತೆಂಗಿನ ಮರವೇರಿ ಕಾಯಿ ಕೀಳುವ ಜತೆಗೆ ಕೃಷಿ ಕಾರ್ಮಿಕರಾಗಿಯೂ ದುಡಿಯುತ್ತಾರೆ. ಬಾಲ್ಯದಿಂದಲೂ ಇವರಿಗೆ ಕ್ರೀಡೆಯ ಕುರಿತು ಆಸಕ್ತಿ ಇದ್ದರೂ ಬಡತನ, ಹಣದ ಅಭಾವದಿಂದ ಹಿನ್ನಡೆಯಾಗಿತ್ತು.ಹೀಗಾಗಿ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಬೇಕಾದ ಅನಿವಾರ್ಯತೆ ಕೂಡ ಎದುರಾಯಿತು.
ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡೋ ಕನಸು ಕನಸಾಗಿಯೇ ಉಳಿದಿತ್ತು. ಇನ್ನೇನಿದ್ದರೂ ಕೂಲಿ ಕೆಲಸವೇ ಜೀವನಕ್ಕೆ ಗತಿ ಅಂದುಕೊಂಡರೂ ಕ್ರೀಡೆ ಮೇಲಿನ ಒಲವನ್ನು ನಿಲ್ಲಿಸಲೇ ಇಲ್ಲ. ಇದೀಗ ಕ್ರೀಡೆಯೇ ಇವರಿಗೆ ಅದೃಷ್ಟ ದೇವತೆಯಾಗಿ ಕೈ ಹಿಡಿದಿದೆ. ಸಣ್ಣ ಪುಟ್ಟ ಸ್ಪರ್ಧೆಗಳಲ್ಲಿ ಹಾಗೂ ರಾಜ್ಯ , ರಾಷ್ಟ್ರ ಮಟ್ಟಗಳಲ್ಲಿ ಸಾಧನೆ ಮಾಡಿದ್ದರೂ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆನ್ನುವ ತುಡಿತ ನಿರಂತರ ಅವರ ಮನಸ್ಸಲ್ಲೇ ಇತ್ತು.
ಇವರ ಪ್ರತಿಭೆಯನ್ನು ಗುರುತಿಸಿದ ಸ್ನೇಹಿತರೊಬ್ಬರು ಮಾಸ್ಟರ್ ಆ್ಯತ್ಲೆಟಿಕ್ನಲ್ಲಿ ಭಾಗವಹಿಸುವಂತೆ ಸಲಹೆ ನೀಡಿದ್ದರು. ಅದರಂತೆ 15 ವರ್ಷದ ಹಿಂದೆ ಉಡುಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಆ್ಯತ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ ಗೆದ್ದ ವರು ಹಿಂದಿರುಗಿ ನೋಡಲೇ ಇಲ್ಲ,ರಾಷ್ಟ್ರ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ವೇಗದ ನಡಿಗೆ, ಮ್ಯಾರಥಾನ್ನಲ್ಲಿ ಭಾಗವಹಿ ಸುತ್ತಿದ್ದಾರೆ. ಇದುವರೆಗೆ ಹಾಫ್ ಮ್ಯಾರಥಾನ್ನಲ್ಲಿ 31 ಪದಕ, 10 ಸಾವಿರ ಮೀಟರ್ನಲ್ಲಿ 25ಕ್ಕೂ ಹೆಚ್ಚು ಪದಕ, 45 ಕಿಲೋಮೀಟರ್ ಫುಲ್ ಮ್ಯಾರಥಾನ್ನಲ್ಲಿ 1 ಪದಕ ಸೇರಿದಂತೆ 100 ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.ರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಬೇಕೆಂಬುದು ಇವರ ದೊಡ್ಡ ಕನಸಾಗಿತ್ತು. ಅಂತಹ ಅವಕಾಶ ವೊಂದು ಸಿಕ್ಕಿದ್ದು ಪ್ರಶಸ್ತಿ ಗಳಿಸುವ ವಿಶ್ವಾಸ ಅವರದು.
ಸಾಧಕ ವಿಟ್ಠಲ ಶೆಟ್ಟಿಗಾರ್ ಅವರು ಗುರುವಿಲ್ಲದ ಸಾಧಕ ಅಂದರೂ ತಪ್ಪಾಗಲಾರದು.ಮಾಬುಕಳ ಚೇತನಾ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸದಿಂದ ಉತ್ತುಂಗಕ್ಕೆ ಬೆಳೆದವರು. ತಾನು ಬೆಳೆಯುವುದರ ಜತೆಗೆ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೂ ತರಬೇತಿ ನೀಡಿದ್ದಾರೆ.ಇದುವರೆಗೆ ಬಹುತೇಕ ಸ್ವಂತ ಹಣದಲ್ಲೇ ಕ್ರೀಡೆಗಳಲ್ಲಿ ಭಾಗವಹಿಸಿದ್ದು, ಕೂಲಿ ಮಾಡಿ ಲಕ್ಷಾಂತರ ರೂ.ಗಳನ್ನು ವ್ಯಯಿಸಿದ್ದೇನೆ. ಕ್ರೀಡಾ ಪ್ರೇಮಿಗಳ ಸಹಕಾರವೂ ಇದೆ. ಈ ಬಾರಿಯ ಕ್ರೀಡಾಕೂಟ ವಿದೇಶಿ ನೆಲದಲ್ಲಿ ಆಯೋಜನೆಗೊಳ್ಳುವುದರಿಂದ ದೊಡ್ಡ ಮೊತ್ತದ ಹಣದ ಅವಶ್ಯಕತೆಯೂ ಇವರಿಗಿದೆ.