ನ್ಯೂಸ್ ನಾಟೌಟ್: ಕೆಪ್ಪಟ್ರಾಯ ..! ಈ ಖಾಯಿಲೆಯ ಹೆಸರು ಬಹುತೇಕರಿಗೆ ಗೊತ್ತಿರಬಹುದು.ಈ ಖಾಯಿಲೆ ಒಮ್ಮೆ ಶುರುವಾದ್ರೆ ಇತರರಿಗೂ ಹರಡುತ್ತದೆ. ಮುಖ ಊದಿಕೊಳ್ಳುತ್ತೆ.ಇದು ಮಾರಣಾಂತಿಕ ಅಥವಾ ಅಪಾಯಕಾರಿ ಕಾಯಿಲೆ ಅಲ್ಲದೇ ಇದ್ದರೂ ಇದು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾರಣ ಕಾಯಿಲೆ ಕಾಣಿಸಿಕೊಂಡ ಮಕ್ಕಳು ಐದಾರು ದಿನಗಳ ಕಾಲ ವಿಪರೀತ ನೋವಿನಿಂದ ನರಳಬೇಕಾದ ಅನಿವಾರ್ಯತೆ ಇದೆ..!
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಕೆಪ್ಪಟ್ರಾಯ (ಮಂಗನಬಾವು-ಮಂಪ್ಸ್) ರೋಗ ಕಾಣಿಸಿಕೊಳ್ಳುತ್ತಿದೆ ಎನ್ನುವ ಸುದ್ದಿ ಹರಿದಾಡಿದೆ.ಮಕ್ಕಳಲ್ಲಿ ಹೆಚ್ಚಾಗಿ ಈ ರೋಗ ದೃಢಪಡುತ್ತಿರುವುದು ಭಾರಿ ಬೇಸರದ ವಿಚಾರ.ಈ ರೋಗ ಮಕ್ಕಳಿಗೆ ಒಮ್ಮೆ ಬಾಧಿಸಿದರೆ ಶಮನವಾಗೋದಕ್ಕೆ ನಾಲ್ಕೈದು ದಿನಗಳೇ ಬೇಕಾಗಬಹುದು.ಅದರಲ್ಲೂ ಮಕ್ಕಳು ವಿಪರೀತ ನೋವಿನಿಂದ ಬಳಲಬೇಕಾಗುತ್ತದೆ.
ಸದ್ಯ,ಮಂಗಳೂರು, ಮುಡಿಪು ಸಹಿತ ಜಿಲ್ಲೆಯ ಅಲ್ಲಲ್ಲಿ ಕೆಪ್ಪಟ್ರಾಯ ಕಂಡುಬಂದಿರೋದ್ರ ಬಗ್ಗೆ ವರದಿಯಾಗಿದೆ.ಇದು ರೋಗ ನಿರೋಧಕ ಶಕ್ತಿ ಇಲ್ಲದವರಲ್ಲಿ ತೀವ್ರವಾಗಿ ಹರಡುತ್ತದೆ. ಸಾಂಕ್ರಾಮಿಕ ಕಾಯಿಲೆ ಇದಾಗಿದ್ದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. 10ರಿಂದ 15 ದಿನಗಳೊಳಗೆ ವೈರಸ್ ಹರಡಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.
ಈ ಕಾಯಿಲೆ ಆರಂಭಕ್ಕೂ ಮುನ್ನ ಜ್ವರ, ತಲೆನೋವು, ಗಂಟಲು ನೋವು ಇರುತ್ತದೆ ಎಂದು ಹೇಳಲಾಗಿದೆ. ಆಹಾರ ಸೇವಿಸುವಾಗಲೂ ಗಂಟಲು ನೋವು ಉಂಟಾಗುತ್ತದೆ. ಕ್ರಮೇಣ ಕಿವಿಯ ಬಳಿ ಊತ ಬರುತ್ತದೆ. ಮತ್ತೆ ಐದು ದಿನಗಳ ಕಾಲ ದವಡೆ ದಪ್ಪಗಾಗಿ ವಿಪರೀತ ನೋವು ಉಂಟುಮಾಡುತ್ತದೆ. ಬಾಯಲ್ಲಿ ಲಾಲಾರಸವನ್ನು ಉತ್ಪತ್ತಿಮಾಡುವ ಗ್ರಂಥಿಗಳಿಗೆ ವೈರಸ್ ನೇರವಾಗಿ ಅಟ್ಯಾಕ್ ಮಾಡುತ್ತದೆ. ಗ್ರಂಥಿಗಳಲ್ಲಿ ಸೋಂಕು ತಗುಲಿ ಕಾಯಿಲೆ ಉಂಟಾಗುತ್ತದೆ.
ಮುಖ್ಯವಾಗಿ ಈ ರೋಗ ಲಕ್ಷಣ ಕಾಣಿಸಿಕೊಂಡ್ರೆ ಗಂಡು ಮಕ್ಕಳು ತುಂಬಾ ಎಚ್ಚರವಾಗಿರಬೇಕು.ಕೆಪ್ಪಟ್ರಾಯ ಕಾಯಿಲೆ ಕಾಣಿಸಿಕೊಂಡು ಅದು ವಿಪರೀತವಾದಲ್ಲಿ ವೃಷಣಕ್ಕೂ ಸೋಂಕು ತಗಲುವ ಸಾಧ್ಯತೆ ಇದೆ. ವೃಷಣ ದಪ್ಪಗಾಗುವ ಲಕ್ಷಣಗಳೂ ಇದೆಯಾದರೂ ಜೀವಕ್ಕೆ ಅಪಾಯವಿಲ್ಲ. ಸೂಕ್ತ ರೀತಿಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ.
ವೈದ್ಯರು ಹೇಳೋ ಪ್ರಕಾರ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರೋಗ ಶಮನಕ್ಕೆ ವಿಶ್ರಾಂತಿಯೇ ಮುಖ್ಯ. ರೋಗ ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ. ಜಿಲ್ಲೆಯ ಯಾವ ಕಡೆಗಳಲ್ಲಿ ಕೆಪ್ಪಟ್ರಾಯ ರೋಗ ಹೆಚ್ಚು ಇದೆ ಎಂಬ ಮಾಹಿತಿ ಪಡೆದು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡುತ್ತೇನೆ’ ಎನ್ನುತ್ತಾರೆ.