ನ್ಯೂಸ್ ನಾಟೌಟ್ : ವಿವಾಹಿತೆ ಶಿಕ್ಷಕಿಯೊಬ್ಬರ ಶವ ಮಣ್ಣಿನಲ್ಲಿ ಹೂತಿಟ್ಟ ರೀತಿಯಲ್ಲಿ (body found) ಪತ್ತೆಯಾಗಿದೆ. ಮೇಲುಕೋಟೆಯ ಯೋಗಾ ನರಸಿಂಹ ಸ್ವಾಮಿ ದೇವಾಲಯ ಇರುವ ಬೆಟ್ಟದ ತಪ್ಪಲಿನಲ್ಲಿಯೇ ಶಿಕ್ಷಕಿಯ ಮೃತ ದೇಹ ಪತ್ತೆಯಾಗಿದ್ದು, ಕೊಲೆಯಾದ (murder case) ರೀತಿಯಲ್ಲಿ ಪತ್ತೆಯಾಗಿದೆ.
ಮಂಡ್ಯ ಜಿಲ್ಲೆ (mandya news) ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಈ ಘಟನೆ ನಡೆದಿದ್ದು ಬೆಚ್ಚಿ ಬೀಳಿಸುವಂತಿದೆ. ಮಾಣಿಕ್ಯನಹಳ್ಳಿಯ ದೀಪಿಕಾ (28) ಮೃತ ಶಿಕ್ಷಕಿಯೆಂದು ತಿಳಿದು ಬಂದಿದೆ. ಈಕೆ ಮೇಲುಕೋಟೆಯ ಖಾಸಗಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿದ್ದರು. ಮಾಣಿಕ್ಯನಹಳ್ಳಿಯ ವೆಂಕಟೇಶ್ ಎಂಬವರ ಮಗಳಾಗಿರುವ ದೀಪಿಕಾ ಅವರನ್ನು ಅದೇ ಗ್ರಾಮದ ಲೋಕೇಶ್ ಎಂಬವರ ಜತೆ ಮದುವೆ ಮಾಡಿಸಲಾಗಿತ್ತು. ದಂಪತಿಗೆ 8 ವರ್ಷದ ಮಗು ಇದೆಯೆಂದು ತಿಳಿದು ಬಂದಿದೆ.
ಶಿಕ್ಷಕಿ ಮಧ್ಯಾಹ್ನ ಸಮಯಕ್ಕೆ ತರಗತಿ ಮುಗಿಸಿ ಸ್ಕೂಟರ್ನಲ್ಲಿ ವಾಪಸ್ ಮನೆಗೆ ಹೊರಟಿದ್ದರು. ಆದರೆ ಶನಿವಾರ ಸಂಜೆ ವೇಳೆ ಸ್ಕೂಟರ್ ಬೆಟ್ಟದ ತಪ್ಪಲಿನಲ್ಲಿ ನಿಂತಿರುವುದು ಪತ್ತೆಯಾಗಿತ್ತು. ಬೆಟ್ಟದ ತಪ್ಪಲಿನಲ್ಲಿ ಸ್ಕೂಟರ್ ನಿಂತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಕೂಟರ್ ವಶಕ್ಕೆ ಪಡೆದು ಅದರ ನಂಬರ್ ನೆರವಿನಿಂದ ಶಿಕ್ಷಕಿಯ ಊರು ಪತ್ತೆ ಹಚ್ಚಿ ಮನೆಗೆ ಮಾಹಿತಿ ನೀಡಿದ್ದರು. ಇಂದು ಅದೇ ಬೆಟ್ಟದ ತಪ್ಪಲಿನಲ್ಲಿ ಹೂತಿಟ್ಟ ರೀತಿಯಲ್ಲಿ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆ ಮಾಡಿ ಶವವನ್ನು ಹೂತಿಟ್ಟಿರುವುದು ಪತ್ತೆಯಾಗಿದೆ. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈಯಕ್ತಿಕ ದ್ವೇಷ, ಸುಲಿಗೆ, ಅತ್ಯಾಚಾರ ಮತ್ತಿತರ ಕೋನಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.