ನ್ಯೂಸ್ ನಾಟೌಟ್ : ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ಯುವತಿಯೋರ್ವಳು ಕೊನೆಯುಸಿರೆಳೆದ ಘಟನೆ ಪುತ್ತೂರಿನಿಂದ ವರದಿಯಾಗಿತ್ತು.ಐಶ್ವರ್ಯ ಅವರಿಗೆ ಜಾಂಡೀಸ್ ಜ್ವರ ಬಾಧಿಸಿದ್ದು, ಮೊದಲು ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ಅವರ ಲಿವರ್ ಹಾನಿಯಾಗಿದ್ದು, ಲಿವರ್ ಟ್ರಾನ್ಸ್ಪ್ಲಾಂಟ್ ಮಾಡಬೇಕೆಂದು ತಿಳಿಸಿದ್ದರು.
ಇದಕ್ಕಾಗಿ ಅಕ್ಕನಿಗೆ ಸ್ವಂತ ತಂಗಿಯೇ ಲಿವರ್ ದಾನ ಮಾಡಿರುವ ಘಟನೆ ಬಗ್ಗೆ ವರದಿಯಾಗಿದೆ.ಅಕ್ಕನನ್ನು ಹೇಗಾದರೂ ಮಾಡಿ ಉಳಿಸಬೇಕೆಂಬ ಹಿನ್ನಲೆಯಲ್ಲಿ ಲಿವರ್ ದಾನ ಮಾಡಿದ್ದರು.ಆದರೆ ಅಕ್ಕನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗದ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.ಪುತ್ತೂರು ನೆಹರೂ ನಗರದ ದಿ|ಆನಂದ ನಾಯ್ಕ ಅವರ ಪುತ್ರಿ ಐಶ್ವರ್ಯ(29) ಜ.24 ರಂದು ಲಿವರ್ ವೈಫಲ್ಯದಿಂದ ಮೃತಪಟ್ಟಿದ್ದರು.
ಐಶ್ವರ್ಯ ಅವರ ತಾಯಿ ಮೊದಲು ಮಗಳಿಗಾಗಿ ಲಿವರ್ ದಾನ ಮಾಡಲು ಮುಂದಾಗಿದ್ದರು. ಆದರೆ ಅಕ್ಕನ ಮೇಲೆ ಅಪಾರ ಪ್ರೀತಿ, ಅಕ್ಕರೆ ಹೊಂದಿದ್ದ ಬ್ಯಾಂಕ್ ಉದ್ಯೋಗಿಯಾಗಿರುವ ತಂಗಿ ತಾನೇ ಲಿವರ್ ದಾನ ಮಾಡಲು ಮುಂದಾಗಿದ್ದರು. ಅಲ್ಲದೆ ಚಿಕಿತ್ಸೆ ಮುಂದುವರಿದ ಭಾಗವಾಗಿ ಐಶ್ವರ್ಯ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಕ್ಕನಿಗೋಸ್ಕರ ಅನುಷಾ ಕೂಡ ಅದೇ ಆಸ್ಪತ್ರೆಯಲ್ಲಿ ಲಿವರ್ ದಾನ ಮಾಡಿದ್ದರೂ ವಿಧಿಯಾಟ ಬೇರೆಯದೇ ಆಗಿತ್ತು. ಐಶ್ವರ್ಯ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲಿವರ್ ದಾನ ಮಾಡಿದ ತಂಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎಂಜಿನಿಯರಿಂಗ್ ಪದವೀಧರೆಯಾಗಿದ್ದ ಐಶ್ವರ್ಯ ಚಿಕಿತ್ಸೆಗಾಗಿ 40 ಲಕ್ಷ ರೂ. ಖರ್ಚಾಗಿದ್ದು, ಜಾಲತಾಣಗಳಲ್ಲಿಯೂ ನೆರವು ಯಾಚಿಸಲಾಗಿತ್ತು. ಮೃತರು ತಾಯಿ, ಸಹೋದರಿಯನ್ನು ಅಗಲಿದ್ದಾರೆ.