ನ್ಯೂಸ್ ನಾಟೌಟ್ : ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಭಾನುವಾರ(ಜ28) ರಾಜೀನಾಮೆ ಸಲ್ಲಿಸಿದ್ದು, ಬಿಹಾರದಲ್ಲಿ ಹೊಸ ರಾಜಕೀಯ ಸಂಚಲನ ಸೃಷ್ಠಿಯಾಗಿದೆ. ಎನ್ ಡಿಎ ಜೊತೆಗೆ ಹೊಸ ಸರ್ಕಾರ ರಚಿಸುವ ಸಾಧ್ಯತೆಯಿದೆ.
ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಜೆಡಿಯು ಶಾಸಕರ ಸಭೆ ನಡೆಸಿದ ಬಳಿಕ ಹಿರಿಯ ಸಚಿವ ಬಿಜೇಂದ್ರ ಯಾದವ್ ಅವರೊಂದಿಗೆ ರಾಜಭವನಕ್ಕೆ ತೆರಳಿದ ನಿತೀಶ್ ಕುಮಾರ್, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದ್ದು, ಹೊಸ ಸರ್ಕಾರ ರಚನೆಯಾಗುವವರೆಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ನಿತೀಶ್ ಕುಮಾರ್ ಅವರಿಗೆ ರಾಜ್ಯಪಾಲರು ಸೂಚಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
ನಿತೀಶ್ ಕುಮಾರ್ ಮಾತನಾಡಿ, ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯದಲ್ಲಿ ಸರ್ಕಾರವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೂ ಹೇಳಿರುವುದಾಗಿ ತಿಳಿಸಿದರು. ಮಹಾಘಟಬಂಧನ್ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲದ ಕಾರಣ ಈ ಪರಿಸ್ಥಿತಿ ಬಂದಿದೆ. ಎಲ್ಲರಿಂದ ಅಭಿಪ್ರಾಯ ತಿಳಿದುಕೊಂಡು ಇಂದು ಸರ್ಕಾರ ವಿಸರ್ಜನೆಯಾಗಿದೆ ಎಂದರು.
ಇಂದು ಸಂಜೆ ಬಿಜೆಪಿಯೊಂದಿಗೆ ಸೇರಿ ನಿತೀಶ್ ಕುಮಾರ್ ಹೊಸ ಸರ್ಕಾರ ರಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.