ನ್ಯೂಸ್ ನಾಟೌಟ್: ಕೇರಳದಲ್ಲಿ ಇತ್ತೀಚೆಗೆ ಪಕ್ಷ ಸೇರ್ಪಡೆಗೊಂಡ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಕಾಂಗ್ರೆಸ್ ಮತ್ತು ಸಿಪಿಐ(ಎಂ) ಬೆಂಬಲಿಗರಿಂದ ಆನ್ಲೈನ್ ದಾಳಿಗಳನ್ನು ಎದುರಿಸುತ್ತಿದ್ದಾರೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ.
ಕ್ರಿಶ್ಚಿಯನ್ ಪಾದ್ರಿ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಸುಮಾರು 50 ಕುಟುಂಬಗಳು ಬಿಜೆಪಿ ಸೇರಿದ ಒಂದು ದಿನದ ನಂತರ ಇಂತಹ ಆರೋಪ ಕೇಳಿಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್, “ಬಿಜೆಪಿ ಸೇರಿದಾಗಿನಿಂದ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ಸೈಬರ್ ದಾಳಿಗೆ ತುತ್ತಾಗುತ್ತಿದ್ದಾರೆ. ನಾವು ಯಾವುದೇ ಬೆಲೆ ತೆತ್ತಾದರೂ ಅವರನ್ನು ರಕ್ಷಿಸುತ್ತೇವೆ. ಈ ಅಲ್ಪಸಂಖ್ಯಾತ ಸಮುದಾಯಕ್ಕೆ ತೊಂದರೆ ಕೊಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿಕೆ ನೀಡಿದ್ದಾರೆ.
“ಬಿಜೆಪಿ ಸೇರ್ಪಡೆಗೊಂಡ ಅರ್ಚಕರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದವರಿಗೆ ಬೆದರಿಕೆ ಹಾಕಲಾಗುತ್ತಿದೆ. ವಿವಿಧ ವಿಧಾನಗಳ ಮೂಲಕ ವೈಯಕ್ತಿಕವಾಗಿ ಅವಮಾನಿಸಲು ಮತ್ತು ಆಕ್ರಮಣ ಮಾಡಲು ಪ್ರಯತ್ನಿಸಿದರೆ ತೀವ್ರ ಸ್ವರೂಪದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಆರ್ಥೊಡಾಕ್ಸ್ ಚರ್ಚ್ ನಿಲಕ್ಕಲ್ ಭದ್ರಾಸನಂನ ಕಾರ್ಯದರ್ಶಿ ಫಾದರ್ ಶೈಜು ಕುರಿಯನ್ ಸೇರಿದಂತೆ ಸುಮಾರು ಐವತ್ತು ಕ್ರಿಶ್ಚಿಯನ್ ಕುಟುಂಬಗಳು ಶನಿವಾರ(ಡಿ.೩೦) ಕೇಂದ್ರ ಸಚಿವ ವಿ.ಮುರಳೀಧರನ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡವು. ಹಾಗೆಯೇ, ಶನಿವಾರ ಮಧ್ಯ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ಕೇರಳ ಕಾಂಗ್ರೆಸ್ ಬಣದ ಅನೇಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿದೆ.
“ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಾಯಕತ್ವದಲ್ಲಿ ಅಭಿವೃದ್ಧಿ ದೃಷ್ಟಿಕೋನದಿಂದ ಅಲ್ಪಸಂಖ್ಯಾತರು ಬಿಜೆಪಿಗೆ ಸೇರಿದ್ದಾರೆ. ಕಳೆದ ದಶಕದಲ್ಲಿ ಮೋದಿ ಸರ್ಕಾರವು ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಿದೆ. ಇದು ಅಲ್ಪಸಂಖ್ಯಾತರನ್ನು ಬೆಂಬಲಿಸಲು ಮತ್ತು ಬಿಜೆಪಿಗೆ ಸೇರಲು ಪ್ರೇರೇಪಿಸುವಲ್ಲಿ ಮಹತ್ವದ ಅಂಶವಾಗಿದೆ. ಸುಳ್ಳು ಪ್ರಚಾರದಿಂದ ಅಲ್ಪಸಂಖ್ಯಾತರನ್ನು ಪಕ್ಷದಿಂದ ದೂರವಿಡಬಹುದು ಎಂಬ ಕಲ್ಪನೆಯನ್ನು ಬಿಜೆಪಿ ಹೊರಹಾಕುತ್ತಿದೆ” ಎಂದು ಬಿಜೆಪಿ ಹೇಳಿದೆ.